ಬಾದಾಮಿ: ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಒಂದೇ ದ್ವನಿ ಕೇಳಿಬರುತ್ತಿದೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಬಾದಾಮಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬೆಂಗಳೂರಿನಲ್ಲಿ ಜನತಾ ಜನಾರ್ಧನನ ದರ್ಶನ ಪಡೆದು ಆಗಮಿಸಿದ್ದೇನೆ. ಕರ್ನಾಟಕದ ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ಮಾಡುವ ಗುರಿಯಿದೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬಹುಮತಗಳಿಂದ ಅಯ್ಕೆ ಮಾಡಿ ಎಂದು ಕರೆ ನೀಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ನ ಭ್ರಷ್ಟಾಚಾರದ ಹಾದಿ ಬಂದ್ ಮಾಡಿದ್ದೇವೆ. ಕಾಂಗ್ರೆಸ್ ನ ಭ್ರಷ್ಟಾಚಾರಕ್ಕೆ ತ್ರಿಶೂಲಾಸ್ತ್ರ ಪ್ರಯೋಗ ಮಾಡಿದ್ದೇವೆ. ಹೀಗಾಗಿ ಕಾಂಗ್ರೆಸ್ ನವರು ನನ್ನನ್ನು ಬೈಯ್ಯುತ್ತಿದ್ದಾರೆ. ಕಾಂಗ್ರೆಸ್ ನಾಯಕ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳುತ್ತಿದ್ದರು. ದೆಹಲಿಯಿಂದ 1 ರೂಪಾಯಿ ಬಿಡುಗಡೆಯಾದರೆ ಜನರಿಗೆ 15 ಪೈಸೆ ತಲುಪುತ್ತೆ ಎಂದು. ರಾಜೀವ್ ಗಾಂಧಿ ಹೇಳಿಕೆಯಂತೆ ಕಾಂಗ್ರೆಸ್ ನವರು 85% ಪಡೆಯುತ್ತಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದಿರಿ. ಆದರೆ ಸಿದ್ದರಾಮಯ್ಯ ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಓಡಿ ಹೋಗಿದ್ದಾರೆ. ಬಾದಾಮಿಯಲ್ಲಿ ಯಾವುದೇ ಅಭಿವೃದ್ಧಿಯನ್ನೂ ಮಾಡಿಲ್ಲ ಎಂದು ಕಿಡಿಕಾರಿದರು.