ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದು, ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ವಿಚಾರವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ತಂಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಶಾಸಕ ರಾಮದಾಸ್ ಭೇಟಿಯಾಗಿದ್ದು, ಈ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಅಮಿತ್ ಶಾ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ಪ್ರಕರಣ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿರುವ ಅಮಿತ್ ಶಾ, ರಾಜ್ಯದಲ್ಲಿ ಸಾಲು ಸಾಲು ಹತ್ಯೆ ಪ್ರಕರಣಗಳ ಕಾರಣ ಕೇಳಿದರು. ಇಂತಹ ಘಟನೆಗಳು ನಡೆಯುವುದನ್ನು ಮೊದಲು ತಡೆಯಬೇಕು. ಮಾಧ್ಯಮಗಳ ಮುಂದೆ ಅನಗತ್ಯ ಹೇಳಿಕೆ ಕೊಡುವುದನ್ನು ಬಿಟ್ಟು ಘಟನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಹತ್ಯೆ ಪ್ರಕರಣಗಳ ಬಗ್ಗೆ ವಿವರ ಪಡೆದುಕೊಳ್ಳಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ? ಅಥವಾ ನಿಮಗೆ ಗೃಹ ಇಲಾಖೆ ನಿಭಾಯಿಸಲು ಆಗುತ್ತಿಲ್ಲವೇ? ಆಗಲ್ಲ ಅಂದ್ರೆ ಹೇಳಿ ಪರ್ಯಾಯ ಮಾರ್ಗಗಳನ್ನು ಹುಡುಕೋಣ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಗೃಹ ಸಚಿವರ ಖಡಕ್ ಎಚ್ಚರಿಕೆ ಬಳಿಕವಾದರೂ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಕಾರ್ಯವೈಖರಿ ಬದಲಾಗಲಿದೆಯೇ ಕಾದು ನೋಡಬೇಕಿದೆ.