ಗೃಹ ಸಚಿವ ಅರಗ ಜ್ಞಾನೇಂದ್ರ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ರಕ್ಷಣೆ ಮಾಡುತ್ತಿದ್ದಾರೆ. ಪೊಲೀಸ್ ಮಹಾ ನಿರ್ದೇಶಕರೂ ಕೂಡ ಅವರೊಂದಿಗಿದ್ದಾರೆ ಎಂದು ಆರೋಪಿಸಿ ಮಾನವ ಹಕ್ಕುಗಳ ಹೋರಾಟ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಗೃಹ ಸಚಿವರು ಹಾಗೂ ಗೃಹ ಇಲಾಖೆ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಆರೋಪಿಯಾಗಿರುವ ಮುರುಘಾ ಶ್ರೀಗಳನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಗೃಹ ಸಚಿವರು ಶ್ರೀಗಳ ಮೇಲಿನ ದೂರಿನ ಹಿಂದೆ ಪಿತೂರಿ ಇದೆ ಎಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗುವುದು ಹೇಗೆ ಎಂದು ರಾಘವೇಂದ್ರ ತಮ್ಮ ದೂರಿನಲ್ಲಿ ಪ್ರಶ್ನಿಸಿದ್ದಾರೆ.
ಹೀಗಾಗಿ ಈ ಪ್ರಕರಣದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತನಿಖೆ ಉಸ್ತುವಾರಿ ಅಗತ್ಯವಿದ್ದು, ಜೊತೆಗೆ ದೇಶದ ಉನ್ನತ ತನಿಖಾ ಸಂಸ್ಥೆಗಳಿಗೆ ಪ್ರಕರಣವನ್ನು ವರ್ಗಾಯಿಸಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.