ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ. ಇದು ಸ್ವಂತ ಮನೆ ಹಾಗೂ ಬಾಡಿಗೆದಾರರಿಗೂ ಅನ್ವಯವಾಗಲಿದ್ದು, ಫ್ರೀ ವಿದ್ಯುತ್ ಗೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವರು ಗೃಹಜ್ಯೋತಿ ಆಪ್ ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು. ಗೃಹಜ್ಯೋತಿ ಯೋಜನೆ ಹೆಸರಿನಲ್ಲಿಯೇ ಬೆಸ್ಕಾಂ ಹೆಡ್ ಆಫೀಸ್ ನಲ್ಲಿ ಆಪ್ ಸಿದ್ಧವಾಗುತ್ತಿದೆ. ಸ್ಮಾರ್ಟ್ ಫೋನ್ ಗಳಲ್ಲಿಯೂ ಗೃಹಜ್ಯೋತಿ ಆಪ್ ಲಭ್ಯವಾಗಲಿದೆ ಎಂದು ತಿಳಿಸಿದರು.
ಎಲ್ಲಾ ಆಪ್ ಗಳಂತೆ ಪ್ಲೇ ಸ್ಟೋರ್, ಆಪಲ್ ಸ್ಟೋರ್ ಗಳಲ್ಲಿಯೂ ಗೃಹಜ್ಯೋತಿ ಆಪ್ ಲಭ್ಯವಿರಲಿದ್ದು, ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಅರ್ಜಿ ತುಂಬಬೇಕು. ಆಧಾರ್ ಕಾರ್ಡ್, ಆರ್.ಆರ್. ನಂಬರ್ ಗೆ ಲಿಂಕ್ ಆಗಬೇಕು. ಸ್ವಂತ ಮನೆ ಇರಲಿ, ಬಾಡಿಗೆ ಮನೆಯಿರಲಿ ಕರಾರು ಪತ್ರದ ದಾಖಲೆ ಇರಬೇಕು. ಬಾಡಿಗೆದಾರು ಕರಾರು ಪತ್ರ ಇಲ್ಲದಿದ್ದರೆ ವೋಟರ್ ಐಡಿ ಪ್ರತಿ ಸಲ್ಲಿಸಬೇಕು. ಸೇವಾ ಸಿಂಧು ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಜುಲೈ ತಿಂಗಳ ಬಿಲ್ ಗೆ ಅನ್ವಯವಾಗಲಿದ್ದು 200 ಯೂನಿಟ್ ವರೆಗೆ ಆಗಸ್ಟ್ ನಲ್ಲಿ ಬಿಲ್ ಪಾವತಿಸಬೇಕಿಲ್ಲ ಎಂದು ವಿವರಿಸಿದರು.