ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದ್ದೀರಿ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ ಎಂದು ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಬಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಹಾಗೂ ವಿಜಯಪುರ, ಕಾಪು ಪೊಲೀಸ್ ಠಾಣೆಯಲ್ಲಿ ಪೊಲೀಸರ ದಿರಿಸು ಬದಲಾವಣೆ ವಿಚಾರವನ್ನು ಟ್ವಿಟರ್ ನಲ್ಲಿ ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ಪೊಲೀಸರ ಡ್ರೆಸ್ ಮಾತ್ರ ಯಾಕೆ ಬದಲಿಸಿದ್ದೀರಿ ಸಿಎಂ ಬೊಮ್ಮಾಯಿಯವರೇ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆ ದೀಕ್ಷೆ ಕೊಟ್ಟುಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ ಕನಸು ನನಸಾಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಅಮಾಯಕ ಯುವಕ-ಯುವತಿಯರ ಮೇಲೆ ಅನೈತಿಕ ಪೊಲೀಸ್ ಗಿರಿಯ ದೌರ್ಜನ್ಯ…ಇನ್ನೊಂದೆಡೆ ಶಾಸಕರಿಂದಲೇ ಠಾಣೆಗೆ ನುಗ್ಗಿ ಆರೋಪಿಗಳ ಬಿಡುಗಡೆ…ಮತ್ತೊಂದೆಡೆ ಬಹಿರಂಗವಾಗಿ ತ್ರಿಶೂಲ ಹಂಚಿ ಹಿಂಸಾಚಾರಕ್ಕೆ ಕರೆ…ಇದಕ್ಕೆಲ್ಲ ಸಿಎಂ ಬೊಮ್ಮಾಯಿ ಅವರಿಂದ ಬಹಿರಂಗ ಬೆಂಬಲ…ರಾಜ್ಯದಲ್ಲಿ ಸರ್ಕಾರ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಗೂಂಡಾಗಿರಿಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥಿಸಿದ ‘ಸಿಎಂ ಕರೆಗೆ ಓಗೊಟ್ಟು ಪೊಲೀಸರು ನೆಲದ ಕಾನೂನನ್ನು ಠಾಣೆಯೊಳಗೆ ಕೂಡಿ ಹಾಕಿ ಕಾಡಿನ ಕಾನೂನನ್ನು ಜಾರಿಗೆ ತರಲು ಬೀದಿಗಿಳಿದಂತಿದೆ’. ಹಾಗಾಗಿ ‘ನಾಡಿನ ಜನತೆ ತಮ್ಮ ಸುರಕ್ಷತೆಗಾಗಿ ಮನೆಯೊಳಗೆ ಇರುವುದು ಕ್ಷೇಮಕ’ ಎಂದು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಜನಪರವಾದ ಉತ್ತಮ ಆಡಳಿತಕ್ಕೆ ಒಂದು ಗೌರವದ ಪರಂಪರೆ ಇದೆ. ಇದು ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶದ ಜಂಗರ್ ರಾಜ್ ಅಲ್ಲ. ಬೊಮ್ಮಾಯಿ ಅವರೇ ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.