ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬೆನ್ನಲೇ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಸಿಎಂ ಸ್ಥಾನಕ್ಕಾಗಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ.
ನೂತನ ಸಿಎಂ ಸ್ಥಾನಕ್ಕೆ ಲಿಂಗಾಯಿತ ಸಮುದಾಯದವರನ್ನು ಇಲ್ಲವೇ ಬ್ರಾಹ್ಮಣ ಸಮುದಾಯದವರನ್ನು ಆಯ್ಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ಈಗಾಗಲೇ ಸಿಎಂ ರೇಸ್ ನಲ್ಲಿ ಪ್ರಮುಖವಾಗಿ ಸಚಿವ ಮುರುಗೇಶ್ ನಿರಾಣಿ, ಪ್ರಹ್ಲಾದ್ ಜೋಶಿ, ಅರವಿಂದ್ ಬೆಲ್ಲದ್, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ಎಲ್.ಸಂತೋಷ್, ಶಿವಕುಮಾರ್ ಉದಾಸಿ ಹೆಸರು ಕೂಡ ಚರ್ಚೆಗೆ ಬರುತ್ತಿದ್ದು, ಪ್ರಹ್ಲಾದ್ ಜೋಶಿ ಬದಲು ಬಿ.ಎಲ್.ಸಂತೋಷ್ ಅವರ ಬಗ್ಗೆ ಹೈಕಮಾಂಡ್ ವಿಶೇಷ ಒಲವು ಹೊಂದಿದೆ ಎನ್ನಲಾಗುತ್ತಿದೆ.
ಒಂದೊಮ್ಮೆ ಬ್ರಾಹ್ಮಣ ಸಮುದಾಯದವರು ಸಿಎಂ ಆಗಿ ಆಯ್ಕೆಯಾದರೆ ಎಸ್ ಟಿ ಸಮುದಾಯದವರಿಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಹಾಗಾದಲ್ಲಿ ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲುಗೆ ಉಪಮುಖ್ಯಮಂತ್ರಿಯಾಗುವ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ರಾಜ್ಯಕ್ಕೆ ಬಿಜೆಪಿ ವೀಕ್ಷಕರು ಆಗಮಿಸಲಿದ್ದು, ಬಳಿಕ ನೂತನ ಸಿಎಂ ಬಗ್ಗೆ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ. ನೂತನ ಸಿಎಂ ಆಯ್ಕೆಯಾದರೆ ಗುರುವಾರ ಪದಗ್ರಹಣ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.