ಬೆಂಗಳೂರು: ಗುಜರಾತ್ ನಲ್ಲಿ ಬಿಜೆಪಿ ಈ ಬಾರಿಯೂ ಅಭೂತಪೂರ್ವ ಗೆಲುವು ಸಾಧಿಸಿದೆ. ಇದು ರಾಜ್ಯದಲ್ಲಿ ಸುಶಾಸನದ ಫಲ, ರಾಜ್ಯದ ಜನತೆ ಬೆಂಬಲ ನೀಡುತ್ತಾರೆ ಎಂಬುದಕ್ಕೆ ಸಾಕ್ಷಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಗುಜರಾತ್ ನಲ್ಲಿ ಬಿಜೆಪಿ ಕಳೆದ ಎಲ್ಲಾ ಚುನಾವಣೆಗಿಂತ ಅತಿ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸತತ 7ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರುತ್ತಿದೆ ಎಂಬುದು ಸಂತಸದ ವಿಚಾರ ಎಂದರು.
ಇದುವರೆಗೂ ದೇಶದಲ್ಲಿ ಆಡಳಿತ ವಿರೋಧಿ ಟ್ರೆಂಡ್ ಇತ್ತು. ಗುಜರಾತ್ ಆಡಳಿತದ ಪರವಾಗಿದೆ ಎಂದು ನಿರೂಪಿಸಿದೆ. ಆಡಳಿತದ ಪರವಾಗಿ ಜನ ನಿಲ್ಲಬೇಕು ಎಂದರೆ ಸರ್ಕಾರಗಳು ಕೆಲಸ ಮಾಡಬೇಕಾಗುತ್ತದೆ. ಆ ಕೆಲಸವನ್ನು ಗುಜರಾತ್ ಸರ್ಕಾರ ಮಾಡಿದೆ. ಎಲ್ಲಕ್ಕೂ ಮಿಗಿಲಾಗಿ ಇದಕ್ಕೆ ಅಡಿಪಾಯ ಹಾಕಿ ಬೆಳಸಿ, ಮಾರ್ಗದರ್ಶನ ಹಾಗೂ ನಾಯಕತ್ವ. ದೇಶ ಮುನ್ನಡೆಸುವ ಶಕ್ತಿ ಮೇಲೆ ಜನ ವಿಶ್ವಾಸ ಇಟ್ಟಿದ್ದಾರೆ ಎಂದು ಹೇಳಿದರು.
ಇನ್ನು ಹಿಮಾಚಲ ಪ್ರದೇಶದಲ್ಲಿಯೂ ಅಂತಿಮವಾಗಿ ಬಿಜೆಪಿ ಗೆಲುವು ಸಾಧಿಸಲಿದ್ದು, ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.