ಭಾನುವಾರ ಸಂಜೆ ಪಶ್ಚಿಮ ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ಸಂಭವಿಸಿದ ತೂಗು ಸೇತುವೆ ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದಾರೆ. 185ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದ್ದು, ಕೆಲವರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.
ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕದಳ, ಮುಳುಗು ತಜ್ಞರು ಸೇರಿದಂತೆ ನೂರಾರು ಮಂದಿ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ನಾಪತ್ತೆಯಾಗಿರುವವರನ್ನು ಹುಡುಕುವ ಕೆಲಸ ನಡೆಯುತ್ತಿದೆ.
ಇದರ ಮಧ್ಯೆ ದುರಂತದ ಸ್ಥಳದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ಚೆಕ್ ಡ್ಯಾಮ್ ತೆರೆಯಲಾಗಿದ್ದು, ಇದರಿಂದ ಕಾರ್ಯಾಚರಣೆಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ. ಶತಮಾನಗಳಷ್ಟು ಹಳೆಯದಾದ ಈ ಸೇತುವೆ ನವೀಕರಣಗೊಂಡು ಕೇವಲ ನಾಲ್ಕು ದಿನಗಳ ಹಿಂದಷ್ಟೇ ಸಾರ್ವಜನಿಕ ಬಳಕೆಗೆ ಮುಕ್ತವಾಗಿತ್ತು.