ಬೆಂಗಳೂರು: ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿ ಒತ್ತಡ ಹಾಕಿದ್ದು, ಆದಷ್ಟು ಬೇಗ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ.ಎಸ್.ಈಶ್ವರಪ್ಪ, ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಗಾಗಿ ದುಡಿದಿದ್ದೇನೆ. 90ರ ದಶಕದಲ್ಲಿ ಬಿಜೆಪಿ ಬೆಳವಣಿಗೆ ವೇಗ ಪಡೆದುಕೊಂಡಿತ್ತು. ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟಿಸುವಲ್ಲಿ ಪಾತ್ರ ವಹಿಸಿದ್ದೇನೆ. ಯಡಿಯೂರಪ್ಪ, ಅನಂತ್ ಕುಮಾರ್ ಜೊತೆ ರಾಜ್ಯಾದ್ಯಂತ ಓಡಾಟ ಮಾಡಿದ್ದೇನೆ, ಬಿಜೆಪಿಯಲ್ಲಿ ಪಕ್ಷ ಸಂಘಟನೆ ಮಾಡಿದ ಯಾರಿಗೂ ನಿರಾಸೆಯಾಗಿಲ್ಲ. ಆದರೆ ಈಗ ಸಂಪುಟ ವಿಸ್ತರಣೆ ವಿಚಾರದಲ್ಲಿ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವನಾಗಿದ್ದಾಗ ನನ್ನ ಮೇಲೆ ನಿರಾಧಾರ ಆರೋಪ ಬಂದಾಗ ರಾಜೀನಾಮೆ ನೀಡಿದ್ದೇನೆ. ಹಿಂದಿನ ಸರ್ಕಾರದಲ್ಲಿ ಕೆ.ಜೆ ಜಾರ್ಜ್ ಮೇಲೆ ಆರೋಪ ಬಂದಾಗ ವಿಪಕ್ಷನಾಯಕನಾಗಿದ್ದ ನಾನು ರಾಜೀನಾಮೆಗೆ ಆಗ್ರಹಿಸಿದೆ. ಆರೋಪ ಮುಕ್ತರಾದರೆ ಮತ್ತೆ ಸಚಿವರಾಗಿ ಎಂದಿದ್ದೆ. ಅದರಂತೆ ನನ್ನ ವಿರುದ್ಧ ಆರೋಪ ಕೇಳಿಬಂದಾಗ ವರಿಷ್ಠರ ಗಮನಕ್ಕೆ ತಂದು ರಾಜೀನಾಮೆ ಕೊಟ್ಟಿದ್ದೇನೆ. ವರಿಷ್ಠರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದಿದ್ದರು. ಆದರೂ ಪಕ್ಷಕ್ಕೆ ಸರ್ಕಾರಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ನೀಡಿದ್ದೆ. ಪ್ರಕರಣದಲ್ಲಿ ಕ್ಲೀನ್ ಚಿಟ್ ಬಂದು 4 ತಿಂಗಳಾಯ್ತು. ಆದರೆ ಈವರೆಗೆ ಸಂಪುಟಕ್ಕೆ ಸೇರಿಸಿಕೊಂಡಿಲ್ಲ, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಶ್ವರಪ್ಪ, ಜಾರಕಿಹೊಳಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದಾಗ ಸಮಾಧಾನವಾಗಿತ್ತು. ಆದರೆ ವಿಳಂಬವಾಗುತ್ತಿದೆ. ಜಾರಕಿಹೊಳಿ, ಹಾಗೂ ನನ್ನನ್ನು ಆದಷ್ಟುನಬೇಗ ಸಂಪುಟಕ್ಕೆ ಸೇರಿಸಿಕೊಳ್ಳಲಿ ಎಂದು ಸಿಎಂ ಹಾಗೂ ವರಿಷ್ಟರಿಗೆ ಒತ್ತಾಯಿಸುತ್ತೇನೆ ಎಂದರು.
ಗುಂಪು ಆಗುವುದು ಬೇಡ ಎಂದು ಇಷ್ಟು ದಿನ ಸುಮ್ಮನಿದ್ದೆ. ಇಂದು ಸಂಜೆ ಮತ್ತೊಮ್ಮೆ ಸಿಎಂ ಬೊಮ್ಮಾಯಿ ಬಳಿ ಮಾತನಾಡಿ ಮುಂದೆ ಏನು ಎಂಬುದನ್ನು ಹೇಳುತ್ತೇನೆ. ಸೌಮ್ಯ ಪ್ರತಿಭಟನೆ ಭಾಗವಾಗಿ ಅಧಿವೇಶನಕ್ಕೆ ಗೈರಾಗುವುದಾಗಿ ಹೇಳಿ ಸ್ಪೀಕರ್ ಕಾಗೇರಿಯವರಿಗೂ ಪತ್ರ ಬರೆದಿದ್ದೇನೆ. ಅವರು ಸಿಎಂ ಜೊತೆ ಮಾತನಾಡಿದ್ದಾರೆ. ಶೀಘ್ರದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಲಿ ಎಂದು ಹೇಳಿದರು.