ಹಾವೇರಿ: ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟ ನಡೆಸಿಲ್ಲ ಎನ್ನಲು, ಸ್ವಾತಂತ್ರ್ಯ ಹೋರಾಟ ನಮ್ಮದು ಎಂದು ಹೇಳಲು ಯಾವ ಅಧಿಕಾರ, ನೈತಿಕತೆಯೂ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯ ಶಿಗ್ಗಾಂವಿಯಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಮಹಾತ್ಮಾ ಗಾಂಧೀಜಿ ಅವರ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ. ಈಗಿನವರು ನಕಲಿ ಗಾಂಧಿವಾದಿಗಳು. ಡ್ಯುಪ್ಲಿಕೇಟ್ ಕಾಂಗ್ರೆಸ್ ಪಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡಬಾರದಿತ್ತು. ಈಗಿರುವುದು ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಅಲ್ಲ, ಇಂದಿರಾ ಕಾಂಗ್ರೆಸ್ ಎಂದು ಟೀಕಿಸಿದರು.
ಸ್ವಾತಂತ್ರ್ಯಕ್ಕಾಗಿ ಕೋಟ್ಯಂತರ ಜನರು ಪ್ರಾಣತ್ಯಾಗ ಮಾಡಿದ್ದಾರೆ. ಅದೆಲ್ಲವನ್ನು ನೆನಪಿನಲ್ಲಿಟ್ಟು ದೇಶವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಬೇಕು. ವಿಶ್ವದಲ್ಲಿ ಭಾರತ ಹಿರಿಯಣ್ಣನಂತೆ ನಿಲ್ಲಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ ಕರೆಯಂತೆ ಕೆಲಸ ಮಾಡುತ್ತಿದ್ದೇವೆ ಎಂದರು .
ಇನ್ನು ಸಾವರ್ಕರ್ ಭಾವಚಿತ್ರ ವಿವಾದ ವಿಚಾರವಾಗಿ ಮಾತನಾಡಿದ ಸಚಿವರು ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಗೆ ಹೋಲಿಕೆ ಸರಿಯಲ್ಲ. ಬ್ಯಾನರ್ ಗಳ ಬಗ್ಗೆ ಆಕ್ಷೇಪ ಇದ್ದರೆ ಆಕ್ಷೇಪಣೆ ಸಲ್ಲಿಸಲಿ. ಅದನ್ನು ಬಿಟ್ಟು ಬ್ಯಾನರ್ ಹರಿಯುವುದು ಆಕ್ರೋಶ ವ್ಯಕ್ತಪಡಿಸುವುದು ಈ ರೀತಿ ಮಾಡಿ ಸೌಹಾರ್ದತೆ ಕದಡುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.