ಬೆಂಗಳೂರು: ಗಾಂಜಾ ಸೇವಿಸಿ ಮತ್ತಲ್ಲಿ ಲಾಂಗ್ ತೋರಿಸಿ ಚಿನ್ನಾಭರಣ, ಮೊಬೈಲ್ ಕದ್ದು ಪರಾರಿಯಾಗಿದ್ದ ಗ್ಯಾಂಗ್ ಬಳಿಕ ಪ್ರಾಯಶ್ಚಿತ್ತಕ್ಕಾಗಿ ದೇವರ ಮೊರೆ ಹೋಗಿ, ವಾಪಸ್ ಬಂದು ಕದ್ದ ಮಾಲ್ ನ್ನು ಮಾರಾಟ ಮಾಡಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.
ಬಾರ್ ನಲ್ಲಿ ಕಂಠಪೂರ್ತಿ ಕುಡಿದು ಹೊರಗೆ ಕುಳಿತಿದ್ದ ಲೋಕೇಶ್ ಎಂಬ ವ್ಯಕ್ತಿಯನ್ನು ಈ ವೇಳೆ ಬೈಕ್ ನಲ್ಲಿ ಬಂದಿದ್ದ ಮೂವರು ಲಾಂಗ್ ತೋರಿಸಿ, 50 ಸಾವಿರ ಮೌಲ್ಯದ ಎರಡು ಚಿನ್ನದ ಉಂಗುರ, 1.40 ಲಕ್ಷ ಮೌಲ್ಯದ 28 ಗ್ರಾಂ ಚಿನ್ನದ ಸರ ಹಾಗೂ 20 ಸಾವಿರ ನಗದು, ಮೊಬೈಲ್ ಕದ್ದು ಆತನದ್ದೇ ಬೈಕ್ ಸಮೇತ ಪರಾರಿಯಾಗಿದ್ದರು.
ಹೀಗೆ ದರೋಡೆ ಮಾಡಿದ ಬೈಕ್ ನಲ್ಲಿ ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ನಂತರ ಮತ್ತೆ ಬೆಂಗಳೂರಿಗೆ ಬಂದು ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಾರೆ. ಅದರಲ್ಲಿ ಬಂದ ಹಣದಲ್ಲಿ ಗೋವಾಗೆ ತೆರಳಿ ಮೋಜು-ಮಸ್ತಿ ಮಾಡಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ದರೋಡೆ ಬಗ್ಗೆ ಲೋಕೇಶ್ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದ ಗಿರಿನಗರ ಪೊಲೀಸರ ಕೈಗೆ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳಲ್ಲಿ ಇಬ್ಬರು ಬಾಲಾಪರಾಧಿಗಳಾಗಿದ್ದಾರೆ. 18 ವರ್ಷದ ನಿತೀನ್ ರಾಜ್ ಹಾಗೂ ಲೊಡ್ಡೆ ಹಾಗೂ 29 ವರ್ಷದ ನಿತಿನ್ ರಾಜ್ ಬಂಧಿತರು. ಆರೋಪಿ ನಿತಿನ್ ರಾಜ್ ಎಂಬಿಎ ಪದವಿಧರನಾಗಿದ್ದು, ಪತ್ನಿ, ಮಗು ಕೂಡ ಇದ್ದಾರೆ. ಆದರೂ ಗಾಂಜಾ ಮತ್ತು, ಬೆಟ್ಟಿಂಗ್ ದಂಧೆ, ಖರ್ಚಿಗಾಗಿ ಕಳ್ಳತನ ಸೇರಿದಂತೆ ಅಡ್ಡದಾರಿ ಹಿಡಿದು ಹಲವುಬಾರಿ ಜೈಲಿಗೆ ಹೋಗಿಬಂದರೂ ಮತ್ತದೆ ಕೆಲಸದಲ್ಲಿ ನಿರತನಾಗಿದ್ದ.