ಬೆಂಗಳೂರು: ಗಣೇಶೋತ್ಸವ ಆಚರಣೆಗೆ ವಿಧಿಸಿರುವ ಷರತ್ತು ಹಾಗೂ ಮಾರ್ಗಸೂಚಿಯನ್ನು ಬದಲಿಸುವಂತೆ ಒತ್ತಾಯಿಸಿ ಹಿಂದೂಪರ ಸಂಘಟನೆ, ಗಣೇಶೋತ್ಸವ ಸಮಿತಿ ಕಾರ್ಯಕರ್ತರು ಬಿಬಿಎಂಪಿ ಮುಂದೆ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಬೆಳಿಗ್ಗೆಯಿಂದ ಜಮಾಯಿಸಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತರು ಗಣೇಶೋತ್ಸವ ಮಾರ್ಗಸೂಚಿ ಬದಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಮಧ್ಯಾಹ್ನ 1:30ರ ಒಳಗಾಗಿ ಮಾರ್ಗಸೂಚಿ ಬದಲಿಸುವಂತೆ ಗಡುವು ನೀಡಿದ್ದರು.
ಪ್ರತಿಭಟನಾಕಾರರು ನೀಡಿದ ಗಡುವಿನ ಸಮಯ ಕಳೆದರೂ ಬಿಬಿಎಂಪಿ ಆಯುಕ್ತರಿಂದ ಗಣೇಶೋತ್ಸವ ಮಾರ್ಗಸೂಚಿ, ಷರತ್ತು ಬದಲಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಾರ್ಯಕರ್ತರು ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿ 5 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ತಂದು, ಕಚೇರಿ ಮುಂದೆಯೇ ಪಟಾಕಿ ಸಿಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಘರ್ಷಣೆಗಳು ನಡೆದಿದ್ದು, ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಹೈಡ್ರಾಮಾ ನಡೆದಿದೆ. ಗಣೇಶೋತ್ಸವಕ್ಕೆ ವಿಧಿಸಿರುವ ಷರತ್ತು ಬದಲಿಸದಿದ್ದರೆ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.