ಬೆಳಗಾವಿ: ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ಕೊಡದಿದ್ದರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.
ಬೆಳಗಾವಿಯ ಹಿರೆಬಾಗೇವಾಡಿಯಲ್ಲಿ ಮಾತನಾಡಿದ ಮುತಾಲಿಕ್, ಈ ವರ್ಷದಿಂದ ಮುಕ್ತವಾಗಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತದೆ. ಹೀಗಾಗಿ ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ಕೊಡಬೇಕು. ಡಿಜೆ ಹಾಕುವಂತಿಲ್ಲ, ಸೌಂಡ್ ಮಾಡುವಂತಿಲ್ಲ, ಅನುಮತಿ ಪಡೆಯಬೇಕು ಎಂದು ಕಿರಿಕಿರಿ ಮಾಡಿದರೆ ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿ ಇಟ್ಟು ಪ್ರತಿಭಟನೆ ಮಾಡುವಂತೆ ತಿಳಿಸಿದರು.
ಕೋವಿಡ್ ನಿಂದ ಎರಡು ವರ್ಷ ಸಾರ್ವಜನಿಕ ಗಣೇಶೋತ್ಸವ ನಡೆದಿಲ್ಲ. ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಹೀಗಾಗಿ ಸೌಂಡ್, ಲೈಟಿಂಗ್ ಬಗ್ಗೆ ಯಾವುದೇ ರೀತಿಯ ನಿರ್ಬಂಧ ಹಾಕಬಾರದು ಎಂದು ಪೊಲೀಸರಿಗೆ ಮನವಿ ಮಾಡಿದರು. ಸಾಲಸೋಲ ಮಾಡಿ ಸೌಂಡ್ ಸಿಸ್ಟಮ್, ಲೈಟಿಂಗ್ ನವರು ಕಷ್ಟ ಅನುಭವಿಸಿದ್ದಾರೆ ಈ ಬಾರಿ ಗಣೇಶೋತ್ಸವ ಅವರ ಬದುಕಿಗೆ ಒಂದು ಆಧಾರವಾಗಲಿ. ಹಾಗಾಗಿ ಸ್ವತಂತ್ರವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶಕೊಡಿ. ಡಿಜೆ ನಿರ್ಬಂಧ ಮಾಡುವುದು ಬೇಡ ಎಂದರು.