ಬೆಂಗಳೂರು: ಮಸೀದಿಗಳಲ್ಲಿನ ಆಜಾನ್ ಮೈಕ್ ತೆರವುಗೊಳಿಸಲು ಮೇ 1ರವರೆಗೆ ಸರ್ಕಾರಕ್ಕೆ ಗಡುವು ನೀಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮಸೀದಿ, ಮಂದಿರ, ಚರ್ಚ್ ಗಳಿಗೆ ಕೇವಲ ನೋಟೀಸ್ ಕೊಟ್ಟು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರ ಅನುಸರಿಸುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ಹತ್ತರಿಂದ ಬೆಳಿಗ್ಗೆ 6 ಗಂಟೆಯವರೆಗೂ ಸಾರ್ವಜನಿಕವಾಗಿ ಮೈಕ್ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಮುಂಜಾನೆ 5 ಗಂಟೆಗೆ ಲೌಡ್ ಸ್ಪೀಕರ್ ಹಾಕುತ್ತಾರೆ. ಆಸ್ಪತ್ರೆ, ಶಾಲೆ, ಕಾಲೇಜು, ಜನವಸತಿ ಪ್ರದೇಶಗಳಲ್ಲಿ ಮೈಕ್ ಹಾಕುವಂತಿಲ್ಲ ಆದರೂ ನಿಯಮ ಉಲ್ಲಂಘನೆಯಾಗುತ್ತಿದೆ. ಮೇ ಒಂದರೊಳಗೆ ಮಸೀದಿಗಳ ಮೇಲಿನ ಲೌಡ್ ಸ್ಪೀಕರ್ ತೆರವಿಗೆ ಎಲ್ಲಾ ಜಿಲ್ಲಾಧಿಗಾರಿಗಳಿಗೂ ಗಡುವು ನೀಡಿದ್ದೆವು. ಆದರೆ ಇಂದು ಬೆಳಿಗ್ಗೆಯೂ ಆಜಾನ್ ನಿಂದ ಶಬ್ದಮಾಲಿನ್ಯವಾಗುತ್ತಿದೆ. ನಮ್ಮ ಎಚ್ಚರಿಕೆಯನ್ನು ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಬೆಳಿಗ್ಗೆ ಈ ಕೆಲಸ ಮಾಡಿದ್ರೆ ಮನೆ ಮೇಲೆ ಬೀಳಲ್ಲ ‘ಕೆಟ್ಟ ದೃಷ್ಟಿ’
ಮೇ9ರಿಂದ ರಾಜ್ಯಾದ್ಯಂತ ಎಲ್ಲಾ ದೇವಾಲಯಗಳ ಮೇಲೆ ಮುಂಜಾನೆ 5 ಗಂಟೆಗೆ ಓಂ ನಮಃ ಶಿವಾಯ, ರಾಮ ಜಪ, ಹನುಮಾನ್ ಚಾಲೀಸ, ಮಂತ್ರಘೋಷಣೆಗಳನ್ನು ಹಾಕಲು ನಿರ್ಧರಿಸಿದ್ದೇವೆ. ರಾಜ್ಯದ ಎಲ್ಲಾ ಮಠಾಧೀಶರು, ಹಿಂದೂಪರ ಸಂಘಟನೆಗಳು, ದೇವಾಲಯಗಳ ಅರ್ಚಕರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ನಮ್ಮನ್ನು ಸರ್ಕಾರ ತಡೆಯಲು ಮುಂದಾದರೆ ಸಂಘರ್ಷ ನಡೆಯಲಿದೆ. ಅದಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತೆ. ನಾವು ಯಾವುದೇ ಧರ್ಮದ ವಿರುದ್ಧ ಹೋರಾಡುತ್ತಿಲ್ಲ. ಕೋರ್ಟ್ ಆದೇಶದ ವಿರುದ್ಧದ ಮನಃಸ್ಥಿತಿ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಎಚ್ಚರಿಸಿದ್ದಾರೆ.