ಬೆಂಗಳೂರು: ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ ವಿಚಾರವಾಗಿ ಚರ್ಚಿಸಲು ಸರ್ವಪಕ್ಷೆ ಸಭೆ ಕರೆಯಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಗಡಿ ವಿವಾದ ಕುರಿತು ಮಹಾರಾಷ್ಟ್ರ ಸಿಎಂ ಹೇಳಿಕೆ ಗಮನಿಸಿದ್ದೇನೆ. ಏಕನಾಥ್ ಶಿಂಧೆ ಹೇಳಿಕೆ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯುತ್ತೇವೆ. ಮುಂದಿನ ವಾರ ಸರ್ವಪಕ್ಷ ಸಭೆ ನಡೆಯಲಿದೆ ಎಂದರು.
ಗಡಿ ವಿವಾದ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರವೇ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದೆ. ವಾದ ಮಂಡನೆಗೆ ನಾವು ಸಮರ್ಥವಾಗಿ ತಯಾರಿ ಮಾಡಿಕೊಂಡಿದ್ದೇವೆ. ಈ ಮಧ್ಯೆ ಮಾತುಕತೆ ನಡೆಸುವ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಈ ಹಿಂದೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಹಾಗಾಗಿ ಸಧ್ಯ ನಮಗೆ ಸುಪ್ರೀಂ ಮುಂದೆ ವಾದ ಮಂದಿಸುವ ಉದ್ದೇಶವಿದೆ. ಆದರೆ ಈಗ ಮಾತುಕತೆ ಬಗ್ಗೆ ಮಹಾ ಸಿಎಂ ಹೇಳಿಕೆ ನೀಡಿದ್ದಾರೆ. ಈ ಮೂಲಕ ಗಡಿ ವಿಚಾರವೇ ಮುಗಿದು ಹೋಗಿದೆ ಎಂದು ಹೇಳಿದರು.