ದಾವಣಗೆರೆ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಶರದ್ ಪವಾರ್ ವಿರುದ್ಧ ಕಿಡಿಕಾರಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಗಡಿ ವಿವಾದ ಇಟ್ಟುಕೊಂಡೇ ಶರದ್ ಪವಾರ್ ರಾಜಕೀಯ ಮಾಡಿದವರು ಎಂದು ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಬೆಳಗಾವಿ ಬಗ್ಗೆ ಮೊದಲಿನಿಂದಲೂ ಶರದ್ ಪವಾರ್ ಗೆ ಸೆಳೆತವಿತ್ತು. ಈ ಹಿಂದೆಯೂ ಅದು ಕೈಗೂಡಿಲ್ಲ. ಈಗಲೂ ಕೈಗೂಡುವುದಿಲ್ಲ. ರಾಜ್ಯದ ಒಂದಿಂಚೂ ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ನೆಲ ಜಲ ಭಾಷೆ ಉಳಿವಿಗಾಗಿ ಸರ್ಕಾರ ಬದ್ಧವಾಗಿದೆ. ಬಹುದಿನಗಳ ಗಡಿ ವಿಚಾರ ಈಗ ಸುಪ್ರೀಂ ಕೋರ್ಟ್ ಮುಂದಿದೆ. ನಮ್ಮ ಸರ್ಕಾರ ಹಿರಿಯ ವಕೀಲರಿಗೆ ಜವಾಬ್ದಾರಿ ವಹಿಸಿದೆ. ಗಡಿ ವಿಚಾರವಾಗಿ ಸರ್ವಪಕ್ಷ ಸಭೆಯನ್ನೂ ಕರೆಯಲಾಗಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.