ಅತ್ಯಾಚಾರ ಆರೋಪ ಹೊತ್ತಿದ್ದ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ, ವಿದೇಶಕ್ಕೆ ಪರಾರಿಯಾಗಿ ತನ್ನದೇ ಸ್ವಂತ ರಾಷ್ಟ್ರ ಕೈಲಾಸ ಕಟ್ಟಿಕೊಂಡಿದ್ದು, ಇದೀಗ ಆತ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣವಾಗಿರುವುದು ಕೈಲಾಸದ ವಿದೇಶಾಂಗ ಸಚಿವ ಎಂದು ಹೇಳಿಕೊಳ್ಳುವ ನಿತ್ಯ ಪ್ರೇಮಾತ್ಮ ಆನಂದ ಸ್ವಾಮಿ ಎಂಬವರು ಬರೆದಿರುವ ಪತ್ರ.
ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಅವರಿಗೆ ಆಗಸ್ಟ್ 7ರಂದು ಈ ಪತ್ರ ಬರೆಯಲಾಗಿದ್ದು ಇದರಲ್ಲಿ, ನಿತ್ಯಾನಂದ ಸ್ವಾಮೀಜಿಯವರಿಗೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಅವರಿಗೆ ಈಗ ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದು, ಹೀಗಾಗಿ ಅವರಿಗೆ ರಾಜಕೀಯ ಆಶ್ರಯ ನೀಡಿದರೆ ಏರ್ ಆಂಬುಲೆನ್ಸ್ ಮೂಲಕ ಶ್ರೀಲಂಕಾಕ್ಕೆ ಕರೆದುಕೊಂಡು ಬರುತ್ತೇವೆ ಎಂದು ತಿಳಿಸಲಾಗಿದೆ.
ಚಿಕಿತ್ಸೆ ಹಾಗೂ ಅದಕ್ಕೆ ಬೇಕಾದ ಎಲ್ಲ ಉಪಕರಣಗಳ ವೆಚ್ಚವನ್ನು ಭರಿಸಲು ತಮ್ಮ ಸರ್ಕಾರ ಸಿದ್ದ ಎಂದು ಕೈಲಾಸ ದೇಶದ ವಿದೇಶಾಂಗ ಸಚಿವರು ಪತ್ರದಲ್ಲಿ ತಿಳಿಸಿದ್ದು, ಅಲ್ಲದೆ ಚಿಕಿತ್ಸೆ ಮುಗಿದ ಬಳಿಕ ಕೋಟ್ಯಾಂತರ ರೂಪಾಯಿ ಬೆಲೆ ಬೀಳುವ ಈ ಉಪಕರಣಗಳನ್ನು ಅಲ್ಲಿಯೇ ಬಿಡುವುದಾಗಿ ಹೇಳಲಾಗಿದೆ. ಜೊತೆಗೆ ಆಶ್ರಯ ನೀಡಿದರೆ ಶ್ರೀಲಂಕಾದಲ್ಲಿ ಭಾರಿ ಹೂಡಿಕೆ ಮಾಡುವುದಾಗಿಯೂ ಸಹ ಆಮಿಷ ಒಡ್ಡಲಾಗಿದೆ.