ಹುಬ್ಬಳ್ಳಿ: ಸದನದ ಕಲಾಪಕ್ಕೆ ಅಡ್ಡಿ ಪಡಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಸದಸ್ಯರ ಧೋರಣೆ ಖಂಡಿಸಿರುವ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ ರಾಜ್ಯದ ಜನತೆ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಭಾಪತಿ ಹೊರಟ್ಟಿ, ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡುತ್ತಾ, ಇವರು ಕೊಡಲ್ಲ ಅಂತಿದ್ದಾರೆ, ಅವರು ಬಿಡಲ್ಲ ಅಂತಿದ್ದಾರೆ. ಒಟ್ಟಾರೆಯಾಗಿ ಕರ್ನಾಟಕದ ಜನತೆಗೆ ನಾವು ಅನ್ಯಾಯ ಮಾಡುತ್ತಿದ್ದೇವೆ. ಓರ್ವ ಸಭಾಪತಿಯಾಗಿ ನಾನು ಈ ಮಾತು ಹೇಳುತ್ತಿಲ್ಲ, ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ. ರಾಜ್ಯದ ಜನರ ಕೋಟ್ಯಂತರ ರೂಪಾಯಿ ಹಣ ವ್ಯರ್ಥವಾಗುತ್ತಿದೆ ಎಂದು ಹೇಳಿದರು. ಸದನದಲ್ಲಿ ಕಾಂಗ್ರೆಸ್ ನಡೆ ಬಗ್ಗೆ ನನಗೆ ಬಹಳ ನೋವಿದೆ. ವಿಪಕ್ಷದವರ ಮನವೊಲಿಸಲು ನಾನು ಪ್ರಯತ್ನ ಮಾಡುತ್ತೇನೆ ಎಂದರು.
ಇದೇ ವೇಳೆ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಹೊರಟ್ಟಿ ಮೇ ತನಕ ಯಾವುದೇ ತೀರ್ಮಾನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ವಿಧಾನ ಪರಿಷತ್ ಚುನಾವಣೆಗೆ ಎರಡು ಹೆಸರು ಹೋಗಿದೆ. ಅದರಲ್ಲಿ ಹೊರಟ್ಟಿ ಹೆಸರು ಇದ್ದರೂ ಇರಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, ಜೋಶಿ ಅವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಮೇಲೆ ಪ್ರೀತಿ ಜಾಸ್ತಿ, ಅದಕ್ಕಾಗಿ ಕಾಳಜಿ ವಹಿಸುತ್ತಾರೆ. ಆದರೆ ಬಿಜೆಪಿ ಸೇರ್ಪಡೆ ಬಗ್ಗೆ ನಾನು ಯಾವುದೇ ತೀರ್ಮಾನ ಮಾಡಿಲ್ಲ ಎಂದು ಹೇಳಿದರು.