ಕೊಪ್ಪಳ: ಮಾಜಿ ಸಚಿವ ಜನಾರ್ಧನ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹೊಸ ಮನೆ ಖರೀದಿ ಮಾಡಿ ಗೃಹ ಪ್ರವೇಶ ನೆರವೇರಿಸಿದ್ದಾರೆ. ಗಂಗಾವತಿಯಲ್ಲಿ ಮನೆ ಖರೀದಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಗಂಗಾವತಿಯಲ್ಲಿ ಮನೆ ಖರೀದಿಸಿದ್ದೇಕೆ ಎಂಬ ಬಗ್ಗೆ ಸ್ವತಃ ಜನಾರ್ಧನ ರೆಡ್ಡಿ ಮಾಹಿತಿ ನೀಡಿದ್ದಾರೆ.
ತಮಗೆಲ್ಲರಿಗೂ ಈ ಹಿಂದೆ ತಿಳಿಸಿದಂತೆ ನಾನು ಬಳ್ಳಾರಿಗೆ ಆಗಮಿಸಲು ಆಗದ ಕಾರಣ ಸಾರ್ವಜನಿಕ ಬದುಕಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು, ಇಂದು ಗಂಗಾವತಿಯಲ್ಲಿ ನನ್ನ ಹೊಸ ನಿವಾಸದ ಗೃಹಪ್ರವೇಶದ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ನನ್ನ ಹುಟ್ಟೂರು ಬಳ್ಳಾರಿಗೆ ಹತ್ತಿರದಲ್ಲಿರುವ ಗಂಗಾವತಿಯಲ್ಲಿ ನನ್ನ ಹೊಸ ನಿವಾಸದ ಗೃಹಪ್ರವೇಶವು ಗೋಪೂಜೆ, ದೇವತಾ ಪೂಜೆ, ರುದ್ರಾಭಿಷೇಕ, ಶಿವಪಂಚಾಕ್ಷರಿ ಪೂಜೆ, ಹೋಮ, ಮಂತ್ರಗಳ ಮೂಲಕ ಶಾಸ್ತ್ರೋಸ್ತ್ರವಾಗಿ ಸರಳವಾಗಿ ನೆರವೇರಿತು.
ಹಿಂದೂ, ವೀರಶೈವ ಲಿಂಗಾಯಿತ ಸಂಪ್ರದಾಯದ ಪ್ರಕಾರ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣಾರವರು, ಕುಟುಂಬ ಸದಸ್ಯರು ಹಾಗೂ ಆಪ್ತರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಯಾರು ಸಹ ಅನ್ಯಥಾ ಭಾವಿಸದೆ ತಮ್ಮ ಶುಭ ಹಾರೈಕೆಗಳನ್ನು ತಾವು ಇದ್ದಲ್ಲಿಯೇ ತಿಳಿಸಬೇಕು ಎಂದು ಗಾಲಿ ಜನಾರ್ಧನ ರೆಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.