ನವದೆಹಲಿ: ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆಗೆ ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ಕಾರಿಡಾರ್ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ಮೋದಿ, ವಾರಣಾಸಿಯ ಕಾಲಭೈರವ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಕಾಲಭೈರವನಿಗೆ ಆರತಿ ಬೆಳಗಿದರು. ಬಳಿಕ ಕಾಶಿ ವಿಶ್ವನಾಥ ದೇಗುಲಕ್ಕೆ ತೆರಳಿದರು.
ಈ ವೇಳೆ ಗಂಗಾನದಿಯಲ್ಲಿ ಮಿಂದೆದ್ದ ಪ್ರಧಾನಿ ಮೋದಿ ತೀರ್ಥಸ್ನಾನ ಮಾಡಿದರು. ರುದ್ರಾಕ್ಷಿ ಹಿಡಿದು ಕೆಲಕಾಲ ಜಪ ಮಾಡುವ ಮೂಲಕ ಗಮನ ಸೆಳೆದರು. ಸಂಜೆ ಗಂಗಾ ಆರತಿ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.
ಸುಮಾರು 339 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಶಿ ವಿಶ್ವನಾಥ ಕಾರಿಡಾರ್ ನ್ನು ಇಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ದೇಶದ ಪುಣ್ಯಕ್ಷೇತ್ರ ಕಾಶಿ ವಿಶ್ವನಾಥ ಮಂದಿರಕ್ಕೆ ಕಾಯಕಲ್ಪ ನೀಡಬೇಕು ಎಂಬ ಪ್ರಧಾನಿ ಮೋದಿ ಅವರ ಹಲವು ವರ್ಷಗಳ ಕನಸು ಇಂದು ನನಸಾಗಲಿದೆ.