ಕುಮಟಾ: ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಅಲ್ಲಿ ಓದಿಸುತ್ತಿದ್ದಾರೆ. ಇಲ್ಲಿ ಶಿಕ್ಷಣದಲ್ಲಿ ಕೇಸರಿಕರಣ ಮಾಡಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಕುಮಟಾದಲ್ಲಿ ಮಾತನಾಡಿದ ಹರಿಪ್ರಸಾದ್, ಖಾಕಿ ಚಡ್ಡಿ, ಕರಿ ಟೋಪಿಯಿಂದ ಇವರು ಯಾವ ಧರ್ಮ ಉಳಿಸುತ್ತಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಧರ್ಮಗಳ ನಡುವೆ ಧ್ವೇಷದ ಭಾವ ಮೂಡಿಸುತ್ತಿದ್ದಾರೆ. ಶಿಕ್ಷಣದಲ್ಲಿ ಸಂಪೂರ್ಣ ಕೇಸರಿಕರಣ ಮಾಡುತ್ತಿದ್ದಾರೆ. ನಾರಾಯಣಗುರು, ಕುವೆಂಪು ಅವರನ್ನು ಪಠ್ಯದಿಂದ ಕೈಬಿಟ್ಟು ಹೆಡ್ಗೆವಾರ್ ಭಾಷಣವನ್ನು ಪಠ್ಯದಲ್ಲಿ ಸೇರಿಸಿದ್ದಾರೆ. ತಮ್ಮ ಮಕ್ಕಳನ್ನು ವಿದೇಶಕ್ಕೆ ಓದಲು ಕಳುಹಿಸಿ ಇಲ್ಲಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿಯಾದರೂ ಏನು? ಕಾಂಗ್ರೆಸ್ 20 ಡ್ಯಾಂ ಕಟ್ಟಿದೆ. ಬಿಜೆಪಿ 1 ಕೆರೆ ಕಟ್ಟಿಲ್ಲ. ಎಲ್ಲಾ ಜಾಗಗಳನ್ನು ಬಿಜೆಪಿಯವರೇ ನುಂಗಿ ಹಾಕಿದ್ದಾರೆ. ಪ್ರಧಾನಿ ಮೋದಿ ಮಾಡಿದ ಅಭಿವೃದ್ಧಿಯಾದರೂ ಏನು ಹೇಳಲಿ ಎಂದು ಸವಾಲು ಹಾಕಿದ್ದಾರೆ.
ನಿಮ್ಮ ಮಕ್ಕಳು ಜೈಲಿಗೆ ಹೋಗಬೇಕು ಎಂದಾದರೆ ಬಿಜೆಪಿಗೆ ಹೋಗಿ. ಅಲ್ಲಿ ಮಕ್ಕಳ ಕೈಗೆ ತಲವಾರ್, ಪಿಸ್ತೂಲ್ ಗಳನ್ನು ಕೊಟ್ಟು ಪಾಠ ಹೇಳುತ್ತಾರೆ. ಯುವಜನತೆಯ ಕೈಗೆ ಬಂದೂಕು, ಶಸ್ತ್ರಾಸ್ತ್ರಗಳನ್ನು ಕೊಟ್ಟು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.