ಬೆಂಗಳೂರು: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಗ್ಗೆ ಮತ್ತೆ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕ್ಷಣಕ್ಕೊಂದು ಬಣ್ಣ ಬದಲಿಸುವ ಇವರ ನಿಜಬಣ್ಣ ಪಿ.ವಿ.ನರಸಿಂಹರಾವ್ ಪ್ರಧಾನಿ ಆಗಿದ್ದಾಗಲೇ ಕನ್ನಡಿಗರಿಗೆ ಅರಿವಾಗಿತ್ತು. ಬೆಂಗಳೂರಿಗೆ ಕಾವೇರಿ 4ನೇ ಹಂತದಲ್ಲಿ ನ್ಯಾಯಸಮ್ಮತವಾಗಿ ಧಕ್ಕಬೇಕಿದ್ದ 9ಟಿಎಂಸಿ ನೀರನ್ನು ತಮಿಳುನಾಡು ಒತ್ತಡಕ್ಕೆ ಮಣಿದು ಕಾಂಗ್ರೆಸ್ ಸಾರಾಸಗಟಾಗಿ ನಿರಾಕರಿಸಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಆ 9 ಟಿಎಂಸಿ ನೀರು ಬೆಂಗಳೂರಿಗೆ ತಂದವರು ಯಾರು? ಅದೇ ಸುಳ್ಳಯ್ಯನನ್ನು ವಿತ್ತಮಂತ್ರಿ, ಡಿಸಿಎಂ ಮಾಡಿದ ದೇವೇಗೌಡರ ಬೆನ್ನಿಗಿರಿದು ಹೋದವರ ನಾಲಿಗೆಯ ಮೇಲೆ ಸತ್ಯಕ್ಕೆ ಸಾವಿದೆಯೇ? ಸಾಧಿಸಿ ತೋರಿದ್ದನ್ನು ಹೇಳಿಕೊಳ್ಳದ ಆ ಹಿರಿಯ ಜೀವದ ತ್ಯಾಗವನ್ನೂ ಹೈಜಾಕ್ ಮಾಡುವ ಹುನ್ನಾರವಷ್ಟೇ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
2013ರಲ್ಲಿ ಇದೇ ಸಿದ್ದಹಸ್ತರು ಸಿಎಂ ಆದ ಮೇಲೆ ನಡೆದ ವಿಧಾನಮಂಡಲ ಜಂಟಿ ಕಲಾಪದಲ್ಲಿ ರಾಜ್ಯಪಾಲರ ಭಾಷಣದಲ್ಲಿ ಕಾವೇರಿ ಐ ತೀರ್ಪಿನ ಭಾಗವಾಗಿ ಕಾವೇರಿ ವಿಸ್ತರಣಾ ಹಾಗೂ ನವೀಕರಣ ಯೋಜನೆಗಳ ಜಾರಿಗೆ ಕೇಂದ್ರದ ಅನುಮೋದನೆ ಕೋರಲಾಗುವುದು ಎಂದು ಹೇಳಿದ್ದರು. ಕೇಂದ್ರದ ಅನುಮೋದನೆ ಎಂದರೆ ಮತ್ತೆ ಮತ್ತೆ ಅರ್ಜಿ ಹಿಡಿದು ಕೇಂದ್ರದ ಮರ್ಜಿಗೆ ಕಾಯುವುದು. ಅದಕ್ಕೆ ಅಂದೇ ಸದನದಲ್ಲಿ ಆ ಭಾಷಣವನ್ನು ಜೆಡಿಎಸ್ ವಿರೋಧಿಸಿತ್ತು. ಕಾವೇರಿ ಐ ತೀರ್ಪಿನ ಭಾಗವಾಗಿ ನಮ್ಮ ಪಾಲಿನ ನೀರು ಬಳಕೆಗೆ ಕ್ರಮ ಕೈಗೊಳ್ಳುವುದು ನಮ್ಮ ಹಕ್ಕು. ಈ ಸರಳ ವಿಚಾರ ಕೂಡ ಸಿಎಂ ಗೆ ಅಂದು ಅರ್ಥವಾಗಲಿಲ್ಲ ಎಂದು ಹೇಳಿದ್ದಾರೆ.
ಶ್ರೀಚಾಮರಾಜೇಶ್ವರ ಸನ್ನಿಧಿಯಲ್ಲಿ ಸಿದ್ದಹಸ್ತರು ಸತ್ಯ ನುಡಿಯಬೇಕಿತ್ತು. ಆದ್ರೆ ಆ ಶಿವನ ಶಿರದಲಿ ನೆಲೆನಿಂತ ಗಂಗೆಯ ಸಾಕ್ಷಿಯಾಗಿ ಸುಳ್ಳು ಹೇಳಿ ಅಪಚಾರ ಎಸಗಿದದರೆ. ತಪ್ಪಿಗೆ ಪ್ರಾಯಶ್ಚಿತ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.