ಕಳೆದ ಕೆಲವು ದಿನಗಳಿಂದ ದಿನಕ್ಕೊಂದು ತಿರುವು ಪಡೆಯುತ್ತಿದ್ದ ಮಹಾರಾಷ್ಟ್ರ ರಾಜಕೀಯ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಬಂಡಾಯ ಶಾಸಕರ ಬಗ್ಗೆ 16 ಮಂದಿ ಪ್ರಮುಖರನ್ನು ಅನರ್ಹಗೊಳಿಸುವ ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ. ಈ ಕುರಿತು ವಿಧಾನಸಭಾ ಡೆಪ್ಯೂಟಿ ಸ್ಪೀಕರ್, ಈಗಾಗಲೇ ಕಾನೂನು ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬಂಡಾಯವೆದ್ದಿರುವ ಶಾಸಕರುಗಳ ಪೈಕಿ 16 ಮಂದಿ ಪ್ರಮುಖರನ್ನು ಅನರ್ಹಗೊಳಿಸಿದರೆ ಬಾಕಿ ಉಳಿದವರು ವಾಪಸ್ ಬರಬಹುದೆಂಬ ನಿರೀಕ್ಷೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ ಶಿವಸೇನೆಯ ನಾಯಕರಲ್ಲಿದ್ದು, ಹೀಗಾಗಿಯೇ ಈ ಕುರಿತು ಚಿಂತನೆ ನಡೆದಿದೆ. ಏಕನಾಥ್ ಶಿಂಧೆ ಹಾಗೂ ಅವರ ಆಪ್ತರ ವಿರುದ್ಧ ಸಮರ ಸಾರಿರುವ ಉದ್ಧವ್ ಠಾಕ್ರೆ, ಯಾರು ಪಕ್ಷ ತೊರೆಯುತ್ತಾರೋ ತೊರೆಯಲಿ. ನಾನು ಹೊಸದಾಗಿ ಕಟ್ಟುತ್ತೇನೆ ಎಂದು ಗುಡುಗಿದ್ದಾರೆ.
ತಮ್ಮನ್ನು ಅನರ್ಹಗೊಳಿಸುವ ಸೂಚನೆ ಸಿಗುತ್ತಿದ್ದಂತೆ ಬಂಡಾಯ ಶಾಸಕರು ತಮ್ಮ ಬಣಕ್ಕೆ ‘ಶಿವಸೇನೆ ಬಾಳಾಸಾಹೇಬ್’ ಎಂದು ಹೆಸರಿಟ್ಟುಕೊಂಡಿದ್ದು, ಅನರ್ಹಗೊಂಡರೆ ಮುಂದೆ ಅನುಸರಿಸಬೇಕಾದ ಮಾರ್ಗಗಳೇನು ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೆ ತಮ್ಮ ಬಣದಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರುಗಳು ಇರುವ ಕಾರಣ ತಮ್ಮದೇ ನಿಜವಾದ ಶಿವಸೇನೆ ಎಂದು ಪ್ರತಿಪಾದಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.