ಉಡುಪಿ: ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದ ಮುಸ್ಲಿಮರನ್ನು ವಾಪಸ್ ಕರೆತರಬೇಕು. ಮುಸ್ಲಿಂ ಹಾಗೂ ಕ್ರೈಸ್ತರನ್ನು ಘರ್ ವಾಪಸಿ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಉಡುಪಿಯ ಪರ್ಯಾಯ ಅದಮಾರು ಮಠದಲ್ಲಿ ನಡೆದ ವಿಶ್ವರೂಪಂ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಟಿಪ್ಪು ಜಯಂತಿ ಮಾಡಲು ಅವಕಾಶ ನೀಡಿದವರು ಅಬ್ದುಲ್ ಕಲಾಂ ಜಯಂತಿಯನ್ನು ಯಾಕೆ ಮಾಡುತ್ತಿಲ್ಲ. ಕಲಾಂ ಅವರು ಭಗವದ್ಗೀತೆಯ ಬಗ್ಗೆ ಮಾತನಾಡಿದ್ದರು. ಅಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಆಚರಿಸುತ್ತಿಲ್ಲ ಯಾಕೆ? ಟಿಪ್ಪು ಜಯಂತಿ ಆಚರಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಟಿಪ್ಪುವಿನ ಖಡ್ಗದ ಕಾರಣಕ್ಕೆ ಬಹಳಷ್ಟು ಮತಾಂತರಗಳು ನಡೆದಿವೆ. ಟಿಪ್ಪು ಜಯಂತಿಯಂದೇ ನಾವು ಮರುಮತಾಂತರ ಮಾಡಬೇಕು. ನಮ್ಮ ಮನೆ, ಗ್ರಾಮಗಳ ಪಕ್ಕದಲ್ಲಿ ಘರ್ ವಾಪಸಿ ನಡೆಸಬೇಕು. ಪಾಕಿಸ್ತಾನಕ್ಕೆ ಹೋದವರನ್ನು ಕರೆತರಬೇಕು. ಕ್ರೈಸ್ತ ಹಾಗೂ ಮುಸ್ಲೀಂ ಧರ್ಮಕ್ಕೆ ಮತಾಂತರಗೊಂಡವರನ್ನು ಘರ್ ವಾಪಸಿ ಮಾಡಬೇಕು ಈ ಮೂಲಕ ಅವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಬೇಕು ಎಂದರು.
ಕಾಂಗೋದಲ್ಲಿ ಆತ್ಮಾಹುತಿ ಬಾಂಬ್ ದಾಳಿ – ಐವರು ಬಲಿ
ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ನಾವು ದೊಡ್ಡ ಮಟ್ಟದಲ್ಲಿ ಕನಸು ಕಾಣಬೇಕು. ಚೀನಾ, ಜಪಾನ್ ಗೆ ಹೋದವರನ್ನು ವಾಪಸ್ ಕರೆತರಬೇಕು. ದೇಶದಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಿದ್ದೇವೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370ನೇ ಕಾಯ್ದೆ ರದ್ದು ಮಾಡಿದ್ದೇವೆ. ಅಖಂಡ ಭಾರತದ ಕಲ್ಪನೆಯಲ್ಲಿ ಪಾಕಿಸ್ತಾನವೂ ಇದೆ. ಮತಾಂತರಗೊಂಡು ಪಾಕಿಸ್ತಾನಕ್ಕೆ ಹೋದವರನ್ನು ಘರ್ ವಾಪಸಿ ಮೂಲಕ ಕರೆ ತರುವ ಮುಂದಾಳತ್ವವನ್ನು ಮಠ, ದೇವಸ್ಥಾನಗಳು ಮಾಡಬೇಕು ಎಂದು ಹೇಳಿದರು.
ಮತಾಂತರ ನಿಷೇಧ ಕಾಯ್ದೆ ಮಸೂದೆ ಮಂಡನೆ ಬೆನ್ನಲ್ಲೇ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.