ನವದೆಹಲಿ: ಭಾರತದಲ್ಲಿ ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸುವ ಯಾವುದೇ ಯೋಜನೆಯನ್ನು ಸರ್ಕಾರ ಹೊಂದಿಲ್ಲ ಮತ್ತು ಅವು ದೇಶದಲ್ಲಿ ಅನಿಯಂತ್ರಿತವಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.
ಆರ್‌ಬಿಐ ಕ್ರಿಪ್ಟೋಕರೆನ್ಸಿಯನ್ನು ನೀಡುವುದಿಲ್ಲ. ಆರ್‌ಬಿಐ ಕಾಯಿದೆ, 1994 ರ ನಿಬಂಧನೆಗಳ ಪ್ರಕಾರ, ಸಾಂಪ್ರದಾಯಿಕ ಪೇಪರ್ ಕರೆನ್ಸಿಯು ಕಾನೂನುಬದ್ಧ ಟೆಂಡರ್ ಆಗಿದ್ದು, ಇದನ್ನು ಆರ್‌ಬಿಐ ನೀಡುತ್ತದೆ. ಸಾಂಪ್ರದಾಯಿಕ ಪೇಪರ್ ಕರೆನ್ಸಿಯ ಡಿಜಿಟಲ್ ಆವೃತ್ತಿಯನ್ನು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಎಂದು ಕರೆಯಲಾಗುತ್ತದೆ ಎಂದು ಸಹಾಯಕ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಕೇಂದ್ರ ಬಜೆಟ್ ಅನ್ನು ಮಂಡಿಸುವಾಗ, ಮುಂದಿನ ಹಣಕಾಸು ವರ್ಷದಿಂದ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ಆರ್‌ಬಿಐ ಡಿಜಿಟಲ್ ರೂಪಾಯಿಯನ್ನು ನೀಡಲಿದೆ ಎಂದು ನಿರ್ಮಲ ಸೀತಾರಾಮನ್ ಹೇಳಿದ್ದರು. ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಪರಿಚಯವು ಅಗ್ಗದ ಮತ್ತು ವೇಗದ ಕರೆನ್ಸಿ ನಿರ್ವಹಣೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ, ಸಹಾಯಕ ಹಣಕಾಸು ಸಚಿವ ಪಂಕಜ್ ಚೌಧರಿ ಅವರು ನೋಟುಗಳ ಮುದ್ರಣವು ಕಾಲಾನಂತರದಲ್ಲಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 2019-20ರಲ್ಲಿ 4,378 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸಲಾಗಿದ್ದು, 2020-21ರಲ್ಲಿ 4,012 ಕೋಟಿ ರೂಪಾಯಿಗೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.