ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಾರದಿಂದ ನಡೆಯುತ್ತಿದ್ದ ಕ್ಯಾಸಿನೋ ಗಲಾಟೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕಾಂಗ್ರೆಸ್ ಮುಖಂಡ ಸೇರಿದಂತೆ 6 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ್ ಹಾಗೂ ಇತರರ ನಡುವೆ ಕಳೆದ ಒಂದು ವಾರದಿಂದ ಕ್ಯಾಸಿನೋ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ರಾಮತೀರ್ಥ ಎನ್ನುವವರಿಗೆ 50 ಲಕ್ಷ ಹಣ ಹೂಡಿಕೆ ಮಾಡಿಸಿ ವಾಪಸ್ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಅಲ್ಲದೇ ಗಿರೀಶ್ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪತಿ ಗಿರೀಶ್ ಗದಿಗೆಪ್ಪಗೌಡರ್ ವಿರುದ್ಧ ಪತ್ನಿ ಗಂಭೀರ ಆರೋಪ ಮಾಡಿದ್ದು, ಪತಿಗೆ ಅನೈತಿಕ ಸಂಬಂಧವಿದ್ದು, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನನಗೆ ಜೀವ ಬೆದರಿಕೆಯೊಡ್ದಿದ್ದಾರೆ. ಅಲ್ಲದೇ ತನ್ನ ಕೊಲೆಗೂ ಯತ್ನಿಸಿದ್ದಾರೆ. ಗಿರೀಶ್ ಗೆ ಕ್ಯಾಸಿನೋ ಹಾಗೂ ಡ್ರಗ್ ಪೆಡ್ಲರ್ ಗಳ ಜತೆ ನಂಟಿದೆ. ತಮ್ಮ ಹಣಕಾಸಿನ ವಿಚಾರವಾಗಿ ನನ್ನನ್ನು ಎಳೆದು ತಂದಿದ್ದಲ್ಲದೇ ಡಿವೋರ್ಸ್ ನೋಟೀಸ್ ನೀಡಿದ್ದಾರೆ. ತಾನು ತನ್ನ ತಾಯಿ ಮನೆಯಲ್ಲಿದ್ದು, ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದರು.
ಈ ಕುರಿತು ಮಾಧ್ಯಮಗಳಲ್ಲಿಯೂ ವಿಸ್ತೃತ ವರದಿ ಪ್ರಸಾರವಾಗಿತ್ತು. ಪತ್ನಿ ನೀಡಿದ ದೂರಿನ ಮೇರೆಗೆ ಇದೀಗ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ್ ಸೇರಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.