ಅಮೆರಿಕದ ನರ್ಸ್ ಒಬ್ಬಳು ಎರಡು ಆಸ್ಪತ್ರೆಗಳ ಸುಮಾರು 100 ರೋಗಿಗಳ ಪ್ರಾಣದ ಜೊತೆಗೆ ಚೆಲ್ಲಾಟವಾಡಿದ್ದಾಳೆ. ಶಕ್ತಿಯುತವಾದ ನೋವು ನಿವಾರಕ ಔಷಧದಲ್ಲಿ ಈಕೆ ಮಾಡಿರೋ ಗೋಲ್‌ಮಾಲ್‌ನಿಂದಾಗಿ 100 ರೋಗಿಗಳ ಜೀವ ಅಪಾಯದಲ್ಲಿದೆ. ಜಾಕ್ವೆಲಿನ್ ಬ್ರೂಸ್ಟರ್ ಎಂಬ ದಾದಿಯನ್ನು ಈಗಾಗ್ಲೇ ಪೊಲೀಸರು ಬಂಧಿಸಿದ್ದಾರೆ.
ಜಾಕ್ವೆಲಿನ್ ಎರಡು ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾಳೆ. ಈ ವೇಳೆ ಕ್ಯಾನ್ಸರ್ ರೋಗಿಗಳಿಗೆ ನೀಡಿದ ನೋವು ನಿವಾರಕ ಹೈಡ್ರೋಮಾರ್ಫೋನ್ ಔಷಧಗಳನ್ನು ಬದಲಾಯಿಸಿದ್ದಾಳೆ. ಬಾಟಲಿಯಿಂದ ಔಷಧಿಯನ್ನು ಹೊರತೆಗೆದು ಅದರಲ್ಲಿ ವಿಭಿನ್ನ ದ್ರಾವಣವನ್ನು ತುಂಬಿಸಿ ಇಟ್ಟಿದ್ದಾಳೆ. ಬಳಿಕ ರೋಗಿಗಳಿಗೂ ಅದೇ ಚುಚ್ಚುಮದ್ದು ನೀಡಲಾಗಿದೆ. ಹೈಡ್ರೋಮಾರ್ಫೋನ್ ಎಂಬುದು ಕ್ಯಾನ್ಸರ್ ರೋಗಿಗಳಿಗೆ ನೋವನ್ನು ಕಡಿಮೆ ಮಾಡಲು ನೀಡುವ ಪ್ರಬಲವಾದ ಪೇಯ್ನ್ ಕಿಲ್ಲರ್.
ಇದು ಹೆರಾಯಿನ್ ಡ್ರಗ್ಸ್‌ನಂತೆಯೂ ಕೆಲಸ ಮಾಡುತ್ತದೆ. ಇದರ ಪರಿಣಾಮ ಎಷ್ಟರ ಮಟ್ಟಿಗೆ ಇದೆಯೆಂದರೆ ಪ್ರತಿದಿನ ಈ ಪೇಯ್ನ್ ಕಿಲ್ಲರ್ ತೆಗೆದುಕೊಳ್ಳಲು ಆರಂಭಿಸಿದ್ರೆ ಅದೇ ಚಟವಾಗಿಬಿಡಬಹುದು. ಹಾಗಾಗಿಯೇ ಆಸ್ಪತ್ರೆಗಳಲ್ಲಿ ಈ ಔಷಧವನ್ನು ಎಚ್ಚರಿಕೆಯಿಂದ ಬಳಸಲಾಗುತ್ತದೆ. ಆದ್ರೆ ನರ್ಸ್ ಜಾಕ್ವೆಲಿನ್ ಈ ಔಷಧಗಳನ್ನೇ ರಹಸ್ಯವಾಗಿ ಕಳವು ಮಾಡಿಬಿಟ್ಟಿದ್ದಾಳೆ.
ಕೆಂಟುಕಿ ನಿವಾಸಿಯಾಗಿರೋ 52 ವರ್ಷದ ಜಾಕ್ವೆಲಿನ್ ಟ್ರಾವೆಲ್ ನರ್ಸ್. ಕಳೆದ ವರ್ಷ ಟೆನ್ನೆಸ್ಸಿಯ ಜಾನ್ಸನ್ ವೈದ್ಯಕೀಯ ಕೇಂದ್ರದಲ್ಲಿ ತನ್ನ ಕೆಲಸ ಪ್ರಾರಂಭಿಸಿದಳು. ಅಲ್ಲಿ ಪೇಯ್ನ್ ಕಿಲ್ಲರ್ ಬಾಟಲಿ ಓಪನ್ ಆಗಿರೋದನ್ನು ಗಮನಿಸಿದಾಗ ಇವಳು ಮಾಡಿರೋ ಕೃತ್ಯ ಬೆಳಕಿಗೆ ಬಂದಿದೆ. ಜಾನ್ಸನ್ ಆಸ್ಪತ್ರೆಯಿಂದ ಹೊರಹಾಕಲ್ಪಟ್ಟ ನಂತರ, ಜಾಕ್ವೆಲಿನ್‌ಗೆ ಪಶ್ಚಿಮ ವರ್ಜೀನಿಯಾದ ರೇಲಿ ಜನರಲ್ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು.
ಇಲ್ಲೂ ಆಕೆ ಅದೇ ಕಾಯಕ ಮುಂದುವರಿಸಿದ್ಲು. ಅದಾದ್ಮೇಲೆ ಆಕೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಈಕೆ ಔಷಧದ ಬದಲು ತುಂಬಿಸಿಟ್ಟಿದ್ದ ದ್ರಾವಣ ಯಾವುದು ಅನ್ನೋದು ಇನ್ನೂ ಪತ್ತೆಯಾಗಿಲ್ಲ. ಚುಚ್ಚುಮದ್ದು ಪಡೆದ ರೋಗಿಗಳೆಲ್ಲ ಭಯದಲ್ಲೇ ಕಾಲಕಳೆಯುವಂತಾಗಿದೆ.