ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಗಳ ಮಾರುಕಟ್ಟೆ ಬೆಲೆಗೆ ಶೀಘ್ರದಲ್ಲಿಯೇ ಭಾರತದ ಔಷಧ ನಿಯಂತ್ರಕರಿಂದ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು ಪಡೆಯುವ ನಿರೀಕ್ಷೆಯಿದೆ. ಪ್ರತಿ ಡೋಸ್ ಕೊರೊನಾ ಲಸಿಕೆಗೆ 275 ರೂಪಾಯಿ ಹಾಗೂ ಹೆಚ್ಚುವರಿ ಸೇವಾ ಶುಲ್ಕವನ್ನು 150 ರೂಪಾಯಿಗಳಿಗೆ ಮಿತಿಗೊಳಿಸಲಾಗುವುದು ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಕೊರೊನಾ ಲಸಿಕೆಗಳನ್ನು ಕೈಗೆಟುಕುವಂತೆ ಮಾಡಲು ಲಸಿಕೆಗಳ ಬೆಲೆಯನ್ನು ಮಿತಿಗೊಳಿಸಲು ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರಕ್ಕೆ ನಿರ್ದೇಶಿಸಲಾಗಿದೆ.
ಇಲ್ಲಿಯವರೆಗೆ ಕೋವ್ಯಾಕ್ಸಿನ್ ಪ್ರತಿ ಡೋಸ್ಗೆ 1200 ರೂಪಾಯಿ ಹಾಗೂ ಕೋವಿಶೀಲ್ಡ್ ಪ್ರತಿಡೋಸ್ಗೆ 780 ರೂಪಾಯಿ ಇದೆ. ಈ ಬೆಲೆಯಲ್ಲಿ 150 ರೂಪಾಯಿ ಸೇವಾ ಶುಲ್ಕ ಕೂಡ ಸೇರಿದೆ. ಎರಡೂ ಲಸಿಕೆಗಳಿಗೆ ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ.
ಜನವರಿ 19ರಂದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ನ ಕೋವಿಡ್ 19 ತಜ್ಞರ ಸಮಿತಿಯು ಕೋವಿಡ್ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೆಲವು ಷರತ್ತುಗಳಿಗೆ ಒಳಪಟ್ಟು ವಯಸ್ಕ ಜನತೆಗೆ ಬಳಕೆ ಮಾಡಲು ನಿಯಮಿತ ಮಾರುಕಟ್ಟೆ ಅನುಮೋದನೆ ನೀಡುವಂತೆ ಶಿಫಾರಸು ಮಾಡಲಾಗಿದೆ.
ಪ್ರತಿ ಡೋಸ್‌ನ ಬೆಲೆಯನ್ನು 275 ರೂ.ಗಳ ಜೊತೆಗೆ ಹೆಚ್ಚುವರಿ ಸೇವಾ ಶುಲ್ಕ 150 ರೂ.ಗೆ ಸೀಮಿತಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.