ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ನೋಡಿ ಜನರಲ್ಲೂ ಆತಂಕ ಶುರುವಾಗಿದೆ. ಶೀಘ್ರದ್ಲಲೇ ನಾಲ್ಕನೇ ಅಲೆ ಬರಬಹುದೆಂಬ ಆತಂಕ ಮನೆ ಮಾಡಿದೆ. ಆದ್ರೆ ನಾಲ್ಕನೇ ಅಲೆಯ ಭೀತಿಯಿಲ್ಲ ಅಂತ ಐಸಿಎಂಆರ್‌ನ ಮಾಜಿ ಮುಖ್ಯ ವಿಜ್ಞಾನಿ ಡಾ.ರಾಮನ್ ಆರ್.ಗಂಗಾಖೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ.
‘ಇದು ನಾಲ್ಕನೇ ಅಲೆ ಎಂದು ನಾನು ಭಾವಿಸುವುದಿಲ್ಲ. BA.2 ರೂಪಾಂತರವು ಪ್ರಪಂಚದಾದ್ಯಂತದ ಜನರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿ ಅನುಮಾನವೇ ಇಲ್ಲ. ಆದ್ರೆ ನಮ್ಮಲ್ಲಿ ಕೆಲವರು ಮಾಸ್ಕ್‌ಗಳ ಕಡ್ಡಾಯ ಬಳಕೆಯನ್ನು ಹಿಂತೆಗೆದುಕೊಂಡಿರೋದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಮಾಸ್ಕ್ ಬಳಕೆ ಹಿಂತೆಗೆದುಕೊಂಡಾಕ್ಷಣ ಸೋಂಕು ಹೆಚ್ಚಾಗುತ್ತದೆ ಎಂಬ ಭಯ ಬೇಡʼ ಎಂದು ಡಾ.ರಾಮನ್ ಹೇಳಿದ್ದಾರೆ.
ವೈರಸ್‌ನ ಯಾವುದೇ ಹೊಸ ರೂಪಾಂತರವು ಇನ್ನೂ ಕಾಣಿಸಿಕೊಂಡಿಲ್ಲ. ವಯಸ್ಸಾದವರು, ಲಸಿಕೆ ಪಡೆಯದೇ ಇರುವವರು, ಇದುವರೆಗೆ ಸೋಂಕಿಗೆ ಒಳಗಾದವರು ಫೇಸ್ ಮಾಸ್ಕ್ ಬಳಸಬೇಕು ಅನ್ನೋದು ಅವರ ಸಲಹೆ.
ಶಾಲೆಗಳನ್ನು ಮುಚ್ಚುವ ವಿಚಾರವಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶಿಕ್ಷಣ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ, ನಾವು ಶಾಲೆಗಳನ್ನು ಮುಚ್ಚಬಾರದು. ರೋಗನಿರೋಧಕ ಶಕ್ತಿಯ ಕೊರತೆಯಿರುವ 12 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳು ಸಾಧ್ಯವಾದಷ್ಟು ಬೇಗ ಲಸಿಕೆಯನ್ನು ಪಡೆಯಬೇಕು ಎಂದಿದ್ದಾರೆ. ಡಾ.ರಾಮನ್ ಅವರ ಭರವಸೆಯ ನುಡಿಗಳನ್ನು ಕೇಳ್ತಾ ಇದ್ರೆ ನಾಲ್ಕನೇ ಅಲೆಯ ಭೀತಿ ಕೊಂಚ ಕಡಿಮೆಯಾಗೋದಂತೂ ಸುಳ್ಳಲ್ಲ.