ದೇಶದಲ್ಲಿ ಕೋವಿಡ್ ಮತ್ತೆ ಹೆಚ್ಚಳವಾಗುತ್ತಿದೆ. ಈವರೆಗೆ ಅತ್ಯಂತ ಕನಿಷ್ಠ ಮಟ್ಟದಲ್ಲಿ ಜನರಿಗೆ ತಗುಲುತ್ತಿದ್ದ ಸೋಂಕು ಈಗ ಸಾವಿರದ ಗಡಿ ದಾಟಿದೆ. ಗುರುವಾರ ಒಂದೇ ದಿನ 1,300 ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ನಾಲ್ಕು ತಿಂಗಳಲ್ಲಿ ಇದು ಗರಿಷ್ಠ ಎನಿಸಿದೆ.
ಅಲ್ಲದೆ ಕಳೆದ ಫೆಬ್ರವರಿಯಲ್ಲಿ ಪತ್ತೆಯಾದ ಕೋವಿಡ್ 19 ವೈರಸ್ ನ ಎಕ್ಸ್ ಬಿಬಿ 1.16 ರೂಪಾಂತರಿಯೇ ಸೋಂಕು ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದು, ಹೀಗಾಗಿ ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಸೂಚಿಸಿದೆ.
ಸೋಂಕು ನಿಯಂತ್ರಣಕ್ಕಾಗಿ ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕೀಕರಣವನ್ನು ಹೆಚ್ಚಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದ್ದು, ಫೆಬ್ರವರಿಯಲ್ಲಿ 140 ಮಾದರಿಗಳಲ್ಲಿ ಕೋವಿಡ್ ಹೊಸ ರೂಪಾಂತರಿ ದೃಢಪಟ್ಟಿದ್ದರೆ ಮಾರ್ಚ್ ನಲ್ಲಿ ಈವರೆಗೆ 207 ಪ್ರಕರಣಗಳಲ್ಲಿ ಇದು ಪತ್ತೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.