ವಿಶ್ವಕ್ಕೆ ಕೊರೊನಾ ಸೋಂಕು ಹರಡಿದ ಕುಖ್ಯಾತಿಗೆ ಗುರಿಯಾಗಿರುವ ಚೀನಾದಲ್ಲಿ ಇದು ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿಯೇ ಸೋಂಕು ವಿಪರೀತವಾಗಿರುವ ಕೆಲವು ನಗರಗಳಲ್ಲಿ ಲಾಕ್ ಡೌನ್ ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಇದೀಗ ಮತ್ತಷ್ಟು ಕಠಿಣ ಕ್ರಮಕ್ಕೆ ಚೀನಾ ಸರ್ಕಾರ ಮುಂದಾಗಿದೆ.
ಎರಡು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಚೆಂಗ್ಡು ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದ್ದು, ನಿವಾಸಿಗಳು ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ.
ಅಲ್ಲದೆ ಇಲ್ಲಿಗೆ ಆಗಮಿಸುವ ಮತ್ತು ಹೋಗುವ ಶೇಕಡ 70 ರಷ್ಟು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಶಾಲೆಗೆ ನೀಡಿರುವ ರಜೆಯನ್ನು ಮುಂದುವರಿಸಲಾಗಿದೆ. 24 ಗಂಟೆಗೂ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಹೊಂದಿರುವ ಕುಟುಂಬದ ಓರ್ವ ವ್ಯಕ್ತಿ, ಅಗತ್ಯ ವಸ್ತುಗಳನ್ನು ಖರೀದಿಸಲು ಒಂದು ಬಾರಿಗೆ ಮಾತ್ರ ಮನೆಯಿಂದ ಹೊರ ಬರಬಹುದಾಗಿದೆ.