ನವದೆಹಲಿ: ಕೋವಿಡ್ ಸಂಕಷ್ಟದಲ್ಲಿಯೂ ಭಾರತ ಸದೃಢವಾಗಿದ್ದು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮೂಲಕ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.
ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ಸಂಸತ್ ಸೆಂಟ್ರಲ್ ಹಾಲ್ ನಲ್ಲಿ ಜಂಟಿ ಸದನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್, ಕೊರೊನಾ ಮಹಾಮಾರಿಗೆ ಈಗ ಮೂರು ವರ್ಷ. ಕೋವಿಡ್ ಸಂಕಷ್ಟದ ನಡುವೆಯೂ ಭಾರತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಕೊರೊನಾ ವ್ಯಾಕ್ಸಿನ್ ದೇಶದ ಜನರನ್ನು ರಕ್ಷಿಸುತ್ತಿದೆ. ಭಾರತದ ವ್ಯಾಕ್ಸಿನ್ ಗೆ ಇಡೀ ಜಗತ್ತೇ ಪ್ರಶಂಸಿಸಿದೆ. ದೇಶದಲ್ಲಿ ವ್ಯಾಕ್ಸಿನ್ ಅಭಿಯಾನ ವೇಗವಾಗಿ ನಡೆಯುತ್ತಿದೆ. ಶೇ.70ಕ್ಕೂ ಹೆಚ್ಚು ಜನ 2ನೇ ಡೋಸ್ ಪಡೆದುಕೊಂಡಿದ್ದಾರೆ ಎಂದರು.
ರೈತರು, ಬಡವರಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ ಉತ್ಪನ್ನ ದಾಖಲೆ ಪ್ರಮಾಣದಲ್ಲಿ ರಫ್ತಾಗಿದೆ. 2020-21ರಲ್ಲಿ ಕೃಷಿ ಉತ್ಪನ್ನ ಶೇ.25ರಷ್ಟು ರಫ್ತಾಗಿದೆ. ಫಸಲ್ ಭೀಮಾ ಯೋಜನೆಯಿಂದ 8 ಕೋಟಿ ರೈತರಿಗೆ ಲಾಭವಾಗಿದೆ. ಗರೀಬ್ ಕಲ್ಯಾಣ್ ಯೋಜನೆಯಡಿ ಬಡವರಿಗೆ ಉಚಿತವಾಗಿ ಪಡಿತರ ವಿತರಿಸಲಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಲು ಸ್ವಾನಿಧಿ ಯೋಜನೆ ತರಲಾಗಿದೆ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ನೀಡಲಾಗಿದೆ. ಪಿಎಂ ಆವಾಸ್ ಯೋಜನೆಯಡಿ 2 ಕೋಟಿ ಮನೆ ವಿತರಣೆ, ಹರ್ ಘರ್ ಜಲ್ ತಲುಪಿಸಲು ಜಲ್ ಜೀವನ್ ಯೋಜನೆ ಜಾರಿಗೊಳಿಸಲಾಗಿದೆ. ಗ್ರಾಮೀಣ ಭಾಗದ 6 ಕೋಟಿ ಜನರಿಗೆ ನೀರು ಪೂರೈಕೆ ಮಾಡಲಾಗಿದೆ. ಬಡವರು, ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಕೇಂದ್ರ ಸರ್ಕಾರದ ಯೋಜನೆ- ಸಾಧನೆಗಳ ಬಗ್ಗೆ ವಿವರಿಸಿದರು.