ಬೆಂಗಳೂರು: ಬೆಲೆ ಏರಿಕೆ ವಿರೋಧಿಸಿ ಸೈಕಲ್ ಜಾಥಾ ಮೂಲಕ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪೆಟ್ರೋಲ್ ಗೆ 20 ರೂಪಾಯಿ, ಡೀಸೆಲ್ ಗೆ 25 ರೂಪಾಯಿ, ಅಡುಗೆ ಅನಿಲ ದರ 150 ರೂಪಾಯಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ದರ ಶೇ 20ರಷ್ಟು ಕಡಿಮೆ ಮಾಡುವಂತೆ ನಾವು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರಗಳಾಗಲಿ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬೆಲೆ ಇಳಿಕೆ ಮಾಡುವ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಕಿಡಿಕಾರಿದರು.
ಕೋವಿಡ್ ನಿಂದಾಗಿ ಹಲವರು ತಮ್ಮ ಆಸ್ತಿ-ಪಾಸ್ತಿ ಮಾರಾಟ ಮಾಡಿ ಬದುಕುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಘೋಷಿಸಿದ ಆರ್ಥಿಕ ಪ್ಯಾಕೇಜನ್ನು ಯಾರೊಬ್ಬರಿಗೂ ಸರ್ಕಾರ ನೀಡಿಲ್ಲ. ಪರಿಹಾರವನ್ನೂ ಕೊಟ್ಟಿಲ್ಲ. ಆಸ್ಪತ್ರೆಗಳಲ್ಲಿನ ಬಿಲ್ ಕೂಡ ಪಾವತಿಸಿಲ್ಲ. ಸುಪ್ರೀಂ ಕೋರ್ಟ್ ಕೂಡ ಪರಿಹಾರ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿತು. ಆದರೂ ನಯಾಪೈಸೆ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಇಂದು ಜನರು ರೋಸಿಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
13ರ ಬಾಲಕಿ ಮೇಲೆ ಅತ್ಯಾಚಾರವೆಸಗಲು ನೋಡಿದ ತರಬೇತುದಾರನಿಗೆ ಜೈಲು ಶಿಕ್ಷೆ
ಕೋವಿಡ್ ಸಂಕಷ್ಟದ ನಡುವೆ ಜನರು ಜೀವನ ನಡೆಸಲು ತಡಕಾಡುತ್ತಿದ್ದರೆ ಈಗ ಬೆಲೆ ಏರಿಕೆ ಮಾಡುವ ಮೂಲಕ ಇನ್ನಷ್ಟು ಬರೆ ಎಳೆಯಲಾಗುತ್ತಿದೆ. ಮನೆಯಲ್ಲಿರುವ ಒಡವೆ, ಬಂಗಾರ ಅಡವಿಡುವ ಸ್ಥಿತಿ ಬಂದಿದೆ. ಹೆಣ್ಣುಮಕ್ಕಳು ತಮ್ಮ ಮೂಗುಬಟ್ಟು, ತಾಳಿ ಮಾರಿ ಬದುಕುವ ಸ್ಥಿತಿಗೆ ಬಿಜೆಪಿ ಸರ್ಕಾರ ಜನರನ್ನು ತಂದು ನಿಲ್ಲಿಸಿದೆ. ಇಷ್ಟಾದರೂ ಜನರ ಪರವಾಗಿ ಧ್ವನಿ ಎತ್ತದೇ ಸುಮ್ಮನಿರಲು ಸಾಧ್ಯವೇ? ಬೆಲೆ ಇಳಿಕೆಯಾಗುವವರೆಗೂ ಹೋರಾಟ ನಿಲ್ಲದು. ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಯುವಜನತೆ ಕೂಡ ಹೋರಾಟಗಳನ್ನು ನಡೆಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಕಿತ್ತೊಗೆಯುವವರೆಗೂ ಶ್ರಮಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.