ನವದೆಹಲಿ: ಕೋವಿಡ್ ಹೊಡೆತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಜಗತ್ತಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಕೊರೊನಾ ಹೊಸ ರೂಪಾಂತರಿ ವೈರಸ್ ಎಂಟ್ರಿಕೊಟ್ಟಿದ್ದು, ಮತ್ತೆ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕೂಡ ಎಲ್ಲಾ ರಾಜ್ಯಗಳಿಗೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ದಕ್ಷಿಣ ಆಫ್ರಿಕಾ ವಿಜ್ಞಾನಿಗಳು ಮತ್ತೊಂದು ಕೊರೊನಾ ರೂಪಾಂತರ ವೈರಾಣು ಪತ್ತೆ ಮಾಡಿದ್ದಾರೆ. ಬೋಟ್ವಾನಾ, ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್ ನಲ್ಲಿ ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿದೆ. ಕೊರೊನಾ ಹೊಸ ರೂಪಾಂತರಿ ತಳಿ B.1.1529 ಎಂಬ ವೈರಾಣು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ.
ಬೊಟ್ವಾನಾ, ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ರವಾನೆ ಮಾಡಿದ್ದಾರೆ.