ಬೆಂಗಳೂರು: ಮಳೆಯ ಆರ್ಭಟದ ನಡುವೆ ರಾಜ್ಯದಲ್ಲಿ ಕೊರೊನಾ ಸೋಂಕು ಹಾಗೂ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದ್ದು, ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಭೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡೆಗ್ಯೂ ಪ್ರಕರಣ ಹೆಚ್ಚುತ್ತಿದೆ. ಕೋವಿಡ್ ಪ್ರಕರಣ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆ. ದೆಹಲಿಯಲ್ಲಿ ಈಗ ಶೇ.14ರಷ್ಟು ಪಾಸಿಟಿವಿಟಿ ಇದೆ. ಬೆಂಗಳೂರಿನಲ್ಲಿಯೂ ಕೋವಿಡ್ ಕ್ರಮೇಣವಾಗಿ ಹೆಚ್ಚುತ್ತಿದೆ ಎಂದು ಹೇಳಿದರು.
ಕೊರೊನಾ ಸೋಂಕು, ಡೆಂಗ್ಯೂ ಪ್ರಕರಣಗಳು ಹೆಚ್ಚಲು ಮಳೆ, ಹವಾಮಾನ ಬದಲಾವಣೆ ಕೂಡ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಚರ್ಚಿಸಲು ಮಧ್ಯಾಹ್ನ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.