ಕೊರೊನಾದಂತಹ ಮಾರಕ ಕಾಯಿಲೆಯ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ವಿಮಾ ಯೋಜನೆಯನ್ನು ಮತ್ತೆ 180 ದಿನಗಳವರೆಗೆ ವಿಸ್ತರಿಸಲಾಗಿದೆ. “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ʼʼ ಅಡಿಯಲ್ಲಿ ವಿಮಾ ಯೋಜನೆಯನ್ನು ಎಪ್ರಿಲ್ 19ರಿಂದ 180 ದಿನಗಳವರೆಗೆ ವಿಸ್ತರಿಸಿರುವುದಾಗಿ ಸರ್ಕಾರ ಪ್ರಕಟಿಸಿದೆ.
ಕೋವಿಡ್ ರೋಗಿಗಳ ಆರೈಕೆಗೆ ನಿಯೋಜನೆಗೊಂಡಿರುವ ಆರೋಗ್ಯ ಕಾರ್ಯಕರ್ತರ ಪೋಷಕರು ಹಾಗೂ ಇತರೆ ಅವಲಂಬಿತರಿಗೂ ಈ ವಿಮೆಯಿಂದ ಪ್ರಯೋಜನ ದೊರೆಯಲಿದೆ. ಈ ಕುರಿತ ಆದೇಶವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯಗಳ ಹಿರಿಯ ಅಧಿಕಾರಿಗಳಿಗೆ ರವಾನಿಸಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು 2020ರ ಮಾರ್ಚ್ 30ರಂದು ಜಾರಿ ಮಾಡಲಾಗಿತ್ತು.
ಕೊರೊನಾ ರೋಗಿಗಳ ನೇರ ಸಂಪರ್ಕದಲ್ಲಿರುವ ಮತ್ತು ಆರೈಕೆಯಲ್ಲಿರುವ ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ಖಾಸಗಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಸುಮಾರು 22.12 ಲಕ್ಷ ಸಿಬ್ಬಂದಿಗೆ 50 ಲಕ್ಷ ರೂಪಾಯಿ ಮೊತ್ತದ ವಿಮಾ ಸೌಲಭ್ಯವನ್ನು ಈ ಯೋಜನೆ ಅಡಿಯಲ್ಲಿ ಒದಗಿಸಲಾಗಿದೆ.
ಇದಲ್ಲದೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿ, ಸ್ವಯಂಸೇವಕರು, ಸ್ಥಳೀಯ ನಗರ ಸಂಸ್ಥೆಗಳು, ಗುತ್ತಿಗೆ ನೌಕರರು, ಹೊರಗುತ್ತಿಗೆ ಸಿಬ್ಬಂದಿ, ರಾಜ್ಯಗಳು/ಕೇಂದ್ರ ಆಸ್ಪತ್ರೆಗಳು, UTಗಳ ಸ್ವಾಯತ್ತ ಆಸ್ಪತ್ರೆಗಳು, AIIMS ಮತ್ತು ಕೋವಿಡ್-19 ರೋಗಿಗಳ ಆರೈಕೆಗಾಗಿ ನಿರ್ದಿಷ್ಟವಾಗಿ ರಚಿಸಲಾದ ಕೇಂದ್ರ ಸಚಿವಾಲಯಗಳ ರಾಷ್ಟ್ರೀಯ ಪ್ರಾಮುಖ್ಯತೆ ಸಂಸ್ಥೆ (INI)/ಆಸ್ಪತ್ರೆಗಳು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಯೋಜನೆಯು ಪ್ರಾರಂಭವಾದಾಗಿನಿಂದ COVID-19 ಸಂಬಂಧಿತ ಕರ್ತವ್ಯಗಳಿಗೆ ನಿಯೋಜಿಸಲ್ಪಟ್ಟಾಗ ಮೃತಪಟ್ಟಿರುವ ಆರೋಗ್ಯ ಕಾರ್ಯಕರ್ತರ ಪೈಕಿ 1905 ಮಂದಿಗೆ ವಿಮಾ ಸೌಲಭ್ಯ ದೊರೆತಿದೆ.