ಬೆಂಗಳೂರು: ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಆಯ್ಕೆ ಗೊಂದಲದಲ್ಲಿ ಇದ್ದು, ಕೋಲಾರ, ವರುಣಾ ಬಿಟ್ಟು ಬೇರೊಂದು ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದು, ವರುಣಾದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ. ಆದರೆ ವರುಣಾ ಶಾಸಕ ಮಗ ಯತೀಂದ್ರನ ರಾಜಕೀಯ ಭವಿಷ್ಯವಿರುವುದರಿಂದ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
ಕೋಲಾರದಲ್ಲಿ ಸೋಲಿನ ಭೀತಿ, ವರುಣಾದಲ್ಲಿ ಮಗನ ಭವಿಷ್ಯ ವಿಚಾರವಾಗಿ ಇಕ್ಕಟ್ಟಿಗೆ ಸಿಲುಕಿರುವ ಸಿದ್ದರಾಮಯ್ಯ ಇದೀಗ ಕೊಪ್ಪಳದ ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಈ ಬಗ್ಗೆ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದು, ಕುಷ್ಟಗಿ, ಕಡೂರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಬಹುದು ಎಂದು ಗುಸುಗುಸು ಆರಂಭಿಸಿದ್ದಾರೆ. ಸಿದ್ದರಾಮಯ್ಯ ಸ್ಪರ್ಧೆ ಕ್ಷೇತ್ರದ ಬಗ್ಗೆ ನಾಳೆ ನಿರ್ಧಾರ ಪ್ರಕಟವಾಗಲಿದ್ದು, ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದೇ ಸಧ್ಯದ ಕುತೂಹಲ.