ಹಾಸನ: ಕೋರ್ಟ್ ಆವರಣದಲ್ಲಿಯೇ ಪತಿಯಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮಹಿಳೆ ಚೈತ್ರಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ 2ನೇ ಜೆ ಎಂ ಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಶಿವಕುಮಾರ್ ಎಂಬಾತ ತನ್ನ ಪತ್ನಿ ಚೈತ್ರಾಳ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ. ಬಳಿಕ ಮಗುವನ್ನೂ ಕೊಲ್ಲಲು ಯತ್ನಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಚೈತ್ರಾಳನ್ನು ಹಾಸನ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪತಿ ಶಿವಕುಮಾರ್ ನನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಹೊಳೆನರಸಿಪುರ ಪೊಲಿಸರಿಗೆ ಒಪ್ಪಿಸಿದ್ದಾರೆ.
ಹೊಳೆನರಸಿಪುರ ತಾಲೂಕಿನವರೇ ಆದ ಶಿವಕುಮಾರ್ ಹಾಗೂ ಚೈತ್ರಾ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮಗು ಕೂಡ ಇದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಚೈತ್ರಾ ಕೋರ್ಟ್ ಮೆಟ್ಟಿಲೇರಿದ್ದಳು. ಪತಿ ಪತ್ನಿ ನಡುವೆ ಹೊಂದಾಣಿಕೆ ಸಾಧ್ಯವಿಲ್ಲದೇ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿ ಜೀವನಾಂಶ ಕೇಳಿದ್ದಳು. ಇಂದು ಹೊಳೆನರಸಿಪುರ ಸಿವಿಲ್ ನ್ಯಾಯಾಲಯದಲ್ಲಿ ಸಂಧಾನ ಮಾತುಕತೆಗಾಗಿ ಪತಿ-ಪತ್ನಿ ಇಬ್ಬರನ್ನು ಕರೆಸಲಾಗಿತ್ತು. ಲೋಕ್ ಅದಾಲತ್ ನಲ್ಲಿ ಪತ್ನಿ ಹಾಗೂ ಮಗುವನ್ನು ಚನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ್ದ ಪತಿ ಶಿವಕುಮಾರ್ ಬಳಿಕ ಹೊರಬರುತ್ತಿದ್ದಂತೆ ಪತ್ನಿಯ ಕತ್ತಿಗೆ ಚಾಕು ಇರಿದಿದ್ದಾನೆ ಅಲ್ಲದೇ ಮಗುವನ್ನು ಕೊಲ್ಲುವುದಾಗಿ ಬೆದರಿಸಿದ್ದಾನೆ. ಸ್ಥಳದಲ್ಲಿದ್ದವರು ಮಗುವನ್ನು ರಕ್ಷಣೆ ಮಾಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಚೈತ್ರಾಳನ್ನು ಹಾಸನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾದ ಕೆಲವೇ ಸಮಯದಲ್ಲಿ ಚೈತ್ರಾ ಸಾವನ್ನಪ್ಪಿದ್ದಾರೆ.