ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ನಡೆದ ಗಲಾಟೆಯನ್ನು ಬಿಜೆಪಿಯವರು ಕೋಮುಗಲಭೆ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಸವಾಲ್ ಹಾಕಿದ್ದಾರೆ.
ಇಂದು ಭದ್ರಾವತಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲ್ಲೆ ನಡೆಸಿದ ಮುಬಾರಕ್ ಮತ್ತು ಹಲ್ಲೆಗೊಳಗಾದ ಸುನಿಲ್ ಒಟ್ಟಿಗೆ ಜೂಜಾಡುತ್ತಿದ್ದವರು. ಅವರ ನಡುವೆ ವೈಯಕ್ತಿಕ ದ್ವೇಷದಿಂದ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಚಾಕುವಿನಿಂದ ಇರಿಯಲಾಗಿದೆ. ಆದರೆ, ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಬಿಜೆಪಿಯವರು ಇದಕ್ಕೆ ಕೋಮು ಬಣ್ಣ ಹಚ್ಚುತ್ತಿದ್ದಾರೆ ಎಂದು ಆರೋಪಿಸಿದರು.
ನನ್ನ ಮಕ್ಕಳ ಮೇಲೆ, ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ, ಇದು ಕೋಮು ಗಲಭೆಯಲ್ಲ. ಅವರು ಬೇಕಾದರೆ ಮಕ್ಕಳ ಮೇಲೆ ಆಣೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ಭದ್ರಾವತಿಯಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳು ಸಾಕಷ್ಟಿದ್ದು, ಅದರ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ್ಳದೇ ಕೋಮುಗಲಭೆ ಸೃಷ್ಠಿಸುತ್ತಿದೆ ಎಂದು ದೂರಿದ ಅವರು, ಕ್ಷೇತ್ರದಲ್ಲಿ 500 ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಕೇಳಿದ್ದೆ. ಆದರೆ, ನಾನು ಕಾಂಗ್ರೆಸ್ ಶಾಸಕನೆಂದು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಹಿಂದುತ್ವ ಎನ್ನುವ ಬಿಜೆಪಿ, ದೇವಸ್ಥಾನಗಳಿಗೆ ಅನುದಾನ ನೀಡಬೇಕು. ಆದರೆ, ರಾಜಕೀಯ ದ್ವೇಷದಿಂದಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಭದ್ರಾವತಿಯಲ್ಲಿರುವ ಎಂಪಿಎಂ, ವಿಐಎಸ್ಎಲ್ ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸಲು ಗಮನಹರಿಸದ ಬಿಜೆಪಿಯವರು ವೈಯಕ್ತಿಕ ಗಲಾಟೆಗೆ ಕೋಮು ಗಲಭೆ ಸೃಷ್ಠಿಸುತ್ತಿರುವುದು ದುರಾದೃಷ್ಟಕರ. ಭದ್ರಾವತಿ ಜನತೆ ಇಂತಹವರನ್ನು ನಂಬಬಾರದು ಎಂದು ಮನವಿ ಮಾಡಿದರು.