ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ಒಪ್ಪಂದ, ಹೊಂದಾಣಿಕೆ ಮಾತುಕತೆಗಳು ಚುರುಕುಗೊಂಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಗೆ ಬೆಂಬಲ ನೀಡುವಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಹ್ವಾನಕ್ಕೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೋಮುವಾದಿಗಳನ್ನು ಸೋಲಿಸಲು ಜೆಡಿಎಸ್ ನವರೇ ಕಾಂಗ್ರೆಸ್ ಗೆ ಬೆಂಬಲ ನೀಡಲಿ ಎಂದು ಹೇಳಿದ್ದಾರೆ.
ನಾವು ಕೋಮುವಾದಿಗಳನ್ನು ಸೋಲಿಸುತ್ತೇವೆ. ಜೆಡಿಎಸ್ ನವರಿಗೆ ಕೋಮುವಾದಿಗಳನ್ನು ಸೋಲಿಸಬೇಕು ಎಂಬುದಿದ್ದರೆ ನಮ್ಮ ಅಭ್ಯರ್ಥಿಗೆ ಬೆಂಬಲ ಕೊಡಲಿ. ನಾವು ಒಂದು ತಿಂಗಳ ಹಿಂದೆಯೇ ನಿರ್ಧರಿಸಿ ಎರಡನೇ ಅಭ್ಯರ್ಥಿಯಾಗಿ ಅಲ್ಪಸಂಖ್ಯಾತ ಅಭ್ಯರ್ಥಿ ಮನ್ಸೂರ್ ಅವರನ್ನು ನಿಲ್ಲಿಸಿದ್ದೇವೆ. ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಇವರು ಬೆಂಬಲಿಸಲಿ. ನಾವು ಈ ಹಿಂದೆ 80 ಜನ ಇದ್ದರೂ ಕೂಡ ಬಿಜೆಪಿಯವರು ಸಿಎಂ ಆಗಬಾರದು ಎಂದು ಕುಮಾರಸ್ವಾಮಿಯವರನ್ನು ಸಿಎಂ ಮಾಡಲಿಲ್ಲವೇ?
ದೇವೇಗೌಡರು ಪ್ರಧಾನಿಯಾಗಲು ನಾವು ಬೆಂಬಲ ನೀಡಲಿಲ್ಲವೇ? ಹಾಗೆ ಈಗ ನಮಗೆ ಜೆಡಿಎಸ್ ನವರು ಬೆಂಬಲ ನೀಡಲಿ. ನಾವು ಯಾವ ಕಾರಣಕ್ಕೂ ಜೆಡಿಎಸ್ ಗೆ ಬೆಂಬಲಿಸಲ್ಲ. ಅವರೇ ನಮಗೆ ಬೆಂಬಲ ನೀಡಲಿ ಎಂದು ಹೇಳಿದರು.