ಬೆಂಗಳೂರು: ಬಜರಂಗದಳ ಕಾರ್ಯಕರ್ತ ಹರ್ಷ ಹಂತಕರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಗೃಹ ಸಚಿವ ಅರಗ ಜ್ಞಾನೇಂದ್ರ ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಿದ್ದು, ಖುದ್ದು ಪರಿಶೀಲನೆ ನಡೆಸಿದ್ದಾರೆ.
ಹರ್ಷನ ಹತ್ಯೆ ಪ್ರಕರಣದ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹ ಪಾಲಾಗಿದ್ದು, ಈ ನಡುವೆ ಜೈಲಿನಲ್ಲಿದ್ದ ಕೊಲೆ ಆರೋಪಿಗಳಿಗೆ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳು ಲಭ್ಯವಾಗುತ್ತಿದ್ದು, ಹಂತಕರು ಜೈಲಿನಿಂದಲೇ ಹಲವು ಡೀಲ್ ಗಳನ್ನು ಮಾಡಿಕೊಂಡು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿತ್ತು.
ಈ ಹಿನ್ನೆಲೆಯಲ್ಲಿ ಗೃಹ ಸಚಿವರು ದಿಢೀರ್ ಆಗಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಜೈಲಿನಲ್ಲಿದ್ದ ಆರೋಪಿಗಳಿಗೆ ನೇರವಾಗಿ ಪ್ರಶ್ನಿಸಿರುವ ಗೃಹ ಸಚಿವರು ಮೊಬೈಲ್ ಫೋನ್ ಕೈಗೆ ಸಿಕ್ಕಿದ್ದು ಹೇಗೆ ಎಂದು ಕೇಳಿದ್ದಾರೆ.
ಇದೇ ವೇಳೆ ಜೈಲಿನಲ್ಲಿ ಅಕ್ರಮ ಚಟುವಟಿಕೆ ಬಗ್ಗೆ ವರದಿ ಹಿನ್ನೆಲೆಯಲ್ಲಿ ಕಾರಾಗೃಹದ ಹೈಸೆಕ್ಯೂರಿಟಿ ಬ್ಯಾರಕ್ ಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.