ಕಳೆದ ಕೆಲವು ದಿನಗಳಿಂದ ದೇಶ ಹಾಗೂ ರಾಜ್ಯದಲ್ಲಿ ಇಳಿಮುಖವಾಗಿದ್ದ ಕೊರೊನಾ ಸೋಂಕು ಈಗ ನಿಧಾನವಾಗಿ ಏರಿಕೆಯಾಗತೊಡಗಿದೆ. ಅಲ್ಲದೆ ಒಮಿಕ್ರಾನ್ ರೂಪಾಂತರಿಯ ಉಪತಳಿಗಳೂ ಸಹ ಪತ್ತೆಯಾಗಿದ್ದು ನಾಲ್ಕನೇ ಅಲೆ ಭೀತಿ ಎದುರಾಗಿದೆ. ಇದರ ಮಧ್ಯೆ ಮೂರನೇ ಡೋಸ್ ಲಸಿಕೆ ಪಡೆಯಲು ಬಹುತೇಕರು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ.
ರಾಜ್ಯದಲ್ಲಿ ಮೂರನೇ ಡೋಸ್ ಪಡೆಯಲು ಅರ್ಹತೆ ಪಡೆದವರ ಪೈಕಿ ಕೇವಲ ಶೇ.15ರಷ್ಟು ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಬರೋಬ್ಬರಿ 1.3 ಕೋಟಿ ಮಂದಿ ಲಸಿಕೆ ಪಡೆಯಬೇಕಾಗಿದ್ದು, ಈ ಕುರಿತಂತೆ ಅವರುಗಳ ಮೊಬೈಲ್ ಗೆ ಸಂದೇಶಗಳನ್ನು ಕಳುಹಿಸುತ್ತಿದ್ದರೂ ಸಹ ನಿರಾಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ.
ಕೊರೊನಾ ಸೋಂಕು ಕಡಿಮೆಯಾಗಿರುವುದು, ಲಸಿಕೆಗಳು ಭವಿಷ್ಯದಲ್ಲಿ ಅಡ್ಡ ಪರಿಣಾಮಗಳನ್ನು ಬೀರಲಿವೆ ಎಂಬ ವದಂತಿ ಮೊದಲಾದ ಕಾರಣಗಳಿಂದ ಲಸಿಕೆ ಪಡೆಯಲು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎನ್ನಲಾಗಿದ್ದು, ಆರೋಗ್ಯ ಸಿಬ್ಬಂದಿಯೂ ಸಹ ಮೂರನೇ ಡೋಸ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಅಚ್ಚರಿ ಮೂಡಿಸಿದೆ.