ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರು ಈಗಾಗಲೇ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ್ದಾರೆ. ತಜ್ಞರು ದೇಶದಲ್ಲಿ ಜೂನ್ ವೇಳೆಗೆ ನಾಲ್ಕನೇ ಅಲೆ ಕಾಣಿಸಿಕೊಳ್ಳಬಹುದು. ಹೀಗಾಗಿ ಸಾರ್ವಜನಿಕರು ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ನಿರ್ಲಕ್ಷಿಸುವುದು ಸೂಕ್ತವಲ್ಲವೆಂದು ಎಚ್ಚರಿಸುತ್ತಿದ್ದರೂ ಜನ ಕಿವಿಗೆ ಹಾಕಿಕೊಳ್ಳುತ್ತಿಲ್ಲ.
ಇದರ ಮಧ್ಯೆ ಮುನ್ನೆಚ್ಚರಿಕಾ ಕ್ರಮವಾಗಿ ಏಪ್ರಿಲ್ 10 ರಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಪಡೆಯಲು ಅನುವು ಮಾಡಿಕೊಟ್ಟಿದ್ದು, ಆದರೆ ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ನಿರಾಸಕ್ತಿ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಲಸಿಕಾ ತಯಾರಕಾ ಕಂಪನಿಗಳು ಕೊರೊನಾ ಲಸಿಕೆ ದರವನ್ನು ಇಳಿಕೆ ಮಾಡಿದ್ದು, ಕೇಂದ್ರ ಸರ್ಕಾರ ಲಸಿಕೆ ನೀಡಲು ಆಸ್ಪತ್ರೆಗಳಿಗೆ ಸೇವಾ ಶುಲ್ಕ ಸಹ ನಿಗದಿಪಡಿಸಿದೆ.ಇಷ್ಟಾದರೂ ಬೂಸ್ಟರ್ ಡೋಸ್ ಪಡೆಯಲು ಸಾರ್ವಜನಿಕರು ಮುಂದೆ ಬರುತ್ತಿಲ್ಲ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಕಂಡು ಬರುತ್ತಿದ್ದು, ದೇಶದಲ್ಲಿ ನಾಲ್ಕನೇ ಅಲೆ ಬರುವ ಮುನ್ನ ಬೂಸ್ಟರ್ ಡೋಸ್ ಪಡೆಯುವುದು ಸೂಕ್ತ ಎಂದು ತಜ್ಞರು ಸೂಚನೆ ನೀಡಿದ್ದರೂ ಸಾರ್ವಜನಿಕರಿಂದ ಇದಕ್ಕೆ ಅಷ್ಟಾಗಿ ಸ್ಪಂದನೆ ಸಿಕ್ಕುತ್ತಿಲ್ಲ.