ನವದೆಹಲಿ: ವಿಶ್ವಾದ್ಯಂತ ಕೊರೊನಾ ಮೂರನೇ ಅಲೆ ಆರಂಭವಾಗಿದ್ದು, ಈಗಾಗಲೇ ಒಮಿಕ್ರಾನ್ ಎಂಬ ರೂಪಾಂತರಿ ವೈರಸ್ ರೂಪದಲ್ಲಿ ಅಟ್ಟಹಾಸ ಮೆರೆಯುತ್ತಿದೆ.
ಕೋವಿಡ್ ಜತೆಗೇ ರೂಪಾಂತರಿ ಒಮಿಕ್ರಾನ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಇದೀಗ ಮತೊಂದು ಹೊಸ ರೂಪಾಂತರಿ ವೈರಸ್ ಪತ್ತೆಯಾಗಿರುವುದು ಆತಂಕ ಇಮ್ಮಡಿಗೊಳಿಸಿದೆ.
ಡೆಲ್ಟಾಕ್ರಾನ್ ಎಂಬ ಹೊಸ ರೂಪಾಂತರಿ ತಳಿ ಯುರೋಪ್ ಖಂಡದ ದ್ವೀಪ ರಾಷ್ಟ್ರ ಸೈಪ್ರಸ್ ನಲ್ಲಿ ಪತ್ತೆಯಾಗಿದೆ. ಈ ವೈರಸ್ ನಲ್ಲಿ ಡೆಲ್ಟಾ ಹಾಗೂ ಒಮಿಕ್ರಾನ್ ಎರಡೂ ತಳಿಗಳಲ್ಲಿರುವ ಕೆಲ ಸಾಮಾನ್ಯ ಲಕ್ಷಣಗಳು ಪತ್ತೆಯಾಗಿವೆ.
ಸೈಪ್ರಸ್ ನಲ್ಲಿ ಕೊರೊನಾ ಸೋಂಕು ದೃಢಪಟ್ಟ 25 ಸೋಂಕಿತರ ಸ್ಯಾಂಪಲ್ ಜಿನೋಮಿಕ್ ಸೀಕ್ವೆನ್ಸಿಗೆ ಕಳುಹಿಸಿದಾಗ ಕೆಲವರಲ್ಲಿ ಡೆಲ್ಟಾಕ್ರಾನ್ ಎಂಬ ಹೊಸ ವೈರಸ್ ಪತ್ತೆಯಾಗಿದೆ. ಡೆಲ್ಟಾ ಹಾಗೂ ಒಮಿಕ್ರಾನ್ ಮಿಶ್ರ ಲಕ್ಷಣ ಇರುವುದರಿಂದ ಇದಕ್ಕೆ ಡೆಲ್ಟಾಕ್ರಾನ್ ಎಂದು ಕರೆಯಲಾಗುತ್ತಿದೆ. ಆದರೆ ಇನ್ನೂ ಅಧಿಕೃತವಾಗಿ ಹೆಸರಿಟ್ಟಿಲ್ಲ.