ಕೊರೊನಾ ವೈರಸ್ ಎರಡನೇ ಅಲೆಯ ಸೋಂಕು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗ್ತಿದ್ದಂತೆ ದೇಶದ ಅನೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿರ್ಬಂಧದಲ್ಲಿ ಸಡಿಲಿಕೆ ಮಾಡ್ತಿವೆ. ಸೋಮವಾರದಿಂದ ಅನೇಕ ರಾಜ್ಯಗಳು ಕೆಲವು ಸೇವೆಗಳನ್ನು ಶುರು ಮಾಡಿದೆ.
ತಜ್ಞರು ಮತ್ತೊಂದು ಕೊರೊನಾ ಅಲೆ ಬಗ್ಗೆ ಎಚ್ಚರಿಕೆ ನೀಡಿರುವ ಕಾರಣ ಮುನ್ನೆಚ್ಚರಿಕೆ ಕೈಗೊಳ್ಳುವ ಮೂಲಕ ಸೇವೆಗಳನ್ನು ಪುನಃ ಶುರು ಮಾಡಲಾಗ್ತಿದೆ.
ಮಹಾರಾಷ್ಟ್ರದಲ್ಲಿ ಐದು ಹಂತದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುವುದಾಗಿ ಸರ್ಕಾರ ಶುಕ್ರವಾರ ಘೋಷಣೆ ಮಾಡಿತ್ತು. ಅನ್ಲಾಕ್ ಸೋಮವಾರದಿಂದ ಪ್ರಾರಂಭವಾಗಿದೆ. ಸೋಂಕಿನ ದರ ಶೇಕಡಾ 5ಕ್ಕಿಂತ ಕಡಿಮೆ ಇರುವ ನಗರಗಳು ಸಂಪೂರ್ಣ ಅನ್ ಲಾಕ್ ಆಗಲಿದೆ. ಸೋಂಕಿನ ಪ್ರಮಾಣ ಶೇಕಡಾ 5ಕ್ಕಿಂತ ಹೆಚ್ಚಿರುವ ನಗರಗಳಲ್ಲಿ ಕೆಲ ನಿಯಮಗಳನ್ನು ವಿಧಿಸಲಾಗಿದೆ. ಅಂತಿಮ ನಿರ್ಧಾರ ಸ್ಥಳೀಯ ಅಧಿಕಾರಿಗಳ ಕೈನಲ್ಲಿದೆ.
ದೆಹಲಿಯಲ್ಲಿ ಇಂದಿನಿಂದ ಶೇಕಡಾ 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಮೆಟ್ರೋ ರೈಲು ಸೇವೆ ಶುರುವಾಗಿದೆ. ಮಾಲ್ಗಳು, ಮಾರುಕಟ್ಟೆಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳು ಸಮ-ಬೆಸ ಆಧಾರದ ಮೇಲೆ ತೆರೆಯಲು ಅನುಮತಿ ನೀಡಲಾಗಿದೆ. ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಎಲ್ಲ ಅಂಗಡಿಗಳು ಈ ಆಧಾರದ ಮೇಲೆ ಬಾಗಿಲು ತೆರೆಯಬಹುದಾಗಿದೆ. ಖಾಸಗಿ ಕಚೇರಿಗಳು ಶೇಕಡಾ 50 ರಷ್ಟು ಉದ್ಯೋಗಿಗಳೊಂದಿಗೆ ಕೆಲಸ ಮಾಡಬಹುದಾಗಿದೆ. ಸರ್ಕಾರಿ ಕಚೇರಿಯಲ್ಲಿ ಎಲ್ಲಾ ಗ್ರೂಪ್ ಎ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಇತರ ವರ್ಗಗಳ ಶೇಕಡಾ 50 ರಷ್ಟು ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಲಿದ್ದಾರೆ.
ಉತ್ತರ ಪ್ರದೇಶದಲ್ಲಿ 600ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣವಿರುವ 71 ಜಿಲ್ಲೆಗಳಲ್ಲಿ ನಿರ್ಬಂಧವನ್ನು ಸಡಿಲಿಸಲಾಗಿದೆ. ವಾರದಲ್ಲಿ ಐದು ದಿನಗಳವರೆಗೆ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ರಾಜ್ಯದ ಎಲ್ಲಾ 75 ಜಿಲ್ಲೆಗಳಲ್ಲಿ ವಾರದಲ್ಲಿ ಎರಡು ದಿನ ಕರ್ಫ್ಯೂ ವಿಧಿಸಲಾಗುವುದು.
ಕೊರೊನಾ ಸೋಂಕು ಹೆಚ್ಚಿರುವ ತಮಿಳುನಾಡಿದ 11 ಜಿಲ್ಲೆಗಳಿಗೆ ಯಾವುದೇ ರಿಯಾಯಿತಿಯಿಲ್ಲ. ಉಳಿದ ಜಿಲ್ಲೆಗಳಲ್ಲಿ ತರಕಾರಿಗಳು, ದಿನಸಿ, ಮಾಂಸ ಮತ್ತು ಮೀನುಗಳನ್ನು ಮಾರಾಟ ಮಾಡುವ ಅಂಗಡಿಗಳು ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲಿವೆ. ಬೆಂಕಿಕಡ್ಡಿ ಉದ್ಯಮಗಳು ಶೇಕಡಾ 50 ರಷ್ಟು ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಬಹುದು. ಸರ್ಕಾರಿ ಕಚೇರಿಗಳು ಶೇಕಡಾ 30 ರಷ್ಟು ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಲಿವೆ.
ಹರ್ಯಾಣದ 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಹೋಟೆಲ್ಗಳು ಮತ್ತು ಮಾಲ್ಗಳು ಸೇರಿದಂತೆ ರೆಸ್ಟೋರೆಂಟ್ಗಳು ಮತ್ತು ಬಾರ್ಗಳನ್ನು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ತೆರೆಯಲು ಅವಕಾಶವಿದೆ. ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಫಾಸ್ಟ್ ಫುಡ್ ಮಳಿಗೆಗಳಿಗೆ ರಾತ್ರಿ 10ರವರೆಗೆ ಹೋಂ ಡೆಲಿವರಿಗೆ ಅನುಮತಿ ನೀಡಲಾಗಿದೆ. ಬೆಸ-ಸಮ ನೀತಿ ಅನುಸರಿಸಿ ಅಂಗಡಿ ತೆರೆಯಬೇಕು.
ಉತ್ತರಾಖಂಡದಲ್ಲಿ ಸಾಮಾನ್ಯ ಮಳಿಗೆಗಳು ಜೂನ್ 9ರಿಂದ ಜೂನ್ 14 ರ ವೇಳೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ತೆರೆದಿರುತ್ತವೆ. ಈ ವಾರ ಎರಡು ದಿನ ಚಿಲ್ಲರೆ ಅಂಗಡಿಗಳು ತೆರೆದಿರಲಿವೆ. ಮೂರು ದಿನಗಳವರೆಗೆ ಮದ್ಯದಂಗಡಿಗಳನ್ನು ತೆರೆಯಲಾಗುವುದು. ಜೂನ್ 9 ಮತ್ತು ಜೂನ್ 14 ರಂದು ದಿನಸಿ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ತೆರೆಯಲಾಗುವುದು. ಜೂನ್ 9, 11 ಮತ್ತು 14 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಮದ್ಯದಂಗಡಿಗಳನ್ನು ತೆರೆಯಲಾಗುವುದು.