ದೇಶದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದೆ. ಈಗಾಗಲೇ ಮೂರು ಅಲೆಗಳನ್ನು ದೇಶ ಎದುರಿಸಿದ್ದು, ಈಗ ಕೊರೊನಾದ ನಾಲ್ಕನೇ ಅಲೆಯೂ ಬರಬಹುದೆಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಇದರ ಮಧ್ಯೆ ಈಗ ಮತ್ತೊಂದು ವೈರಸ್ ಸೋಂಕಿನ ಭೀತಿ ಎದುರಾಗಿದೆ.
ಜುಲೈ 13ರಂದು ದೇಶದಲ್ಲಿ ಮೊದಲ ಮಂಕಿ ಪಾಕ್ಸ್ ಪ್ರಕರಣ ಕೇರಳದಲ್ಲಿ ವರದಿಯಾಗಿದ್ದು, ಇದಾದ ಕೇವಲ ಐದು ದಿನಗಳಲ್ಲಿ ಮತ್ತೊಂದು ಪ್ರಕರಣ ದೃಢಪಟ್ಟಿದೆ. ದುಬೈನಿಂದ ಭಾರತಕ್ಕೆ ಹಿಂದಿರುಗಿದ್ದ 31 ವರ್ಷದ ಕೇರಳ ಮೂಲದ ವ್ಯಕ್ತಿಯೇ ಈ ಬಾರಿಯೂ ಸೋಂಕಿಗೆ ಒಳಗಾಗಿದ್ದಾರೆ.
ದೇಶದಲ್ಲಿ ಈಗಾಗಲೇ ಎರಡು ಮಂಕಿ ಪಾಕ್ಸ್ ಪ್ರಕರಣ ವರದಿಯಾಗಿರುವುದರ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದ್ದು, ಪ್ರಯಾಣಿಕರ ಆರೋಗ್ಯ ಪರಿಸ್ಥಿತಿ ಕುರಿತು ಹೆಚ್ಚಿನ ಗಮನಹರಿಸುವಂತೆ ಸೂಚಿಸಲಾಗಿದೆ.
ಕಾಡು ಪ್ರಾಣಿಗಳ ಮೂಲಕ ಮನುಷ್ಯರಿಗೆ ಮಂಕಿ ಪಾಕ್ಸ್ ವೈರಸ್ ಹರಡುತ್ತದೆ ಎಂದು ಹೇಳಲಾಗಿದ್ದು, ಈಗಾಗಲೇ ಇದು ಜಗತ್ತಿನ 63 ರಾಷ್ಟ್ರಗಳಲ್ಲಿ ಒಂಬತ್ತು ಸಾವಿರಕ್ಕೂ ಅಧಿಕ ಜನರಿಗೆ ತಗುಲಿದೆ ಎಂದು ಮೂಲಗಳು ತಿಳಿಸಿವೆ.