alex Certify BIG NEWS: ಕೊರೊನಾದ ಸೌಮ್ಯ ಸೋಂಕಿದ್ದರೂ ಪುರುಷತ್ವಕ್ಕೇ ಕುತ್ತು, ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾದ ಸೌಮ್ಯ ಸೋಂಕಿದ್ದರೂ ಪುರುಷತ್ವಕ್ಕೇ ಕುತ್ತು, ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಕೊರೊನಾ ಸೋಂಕಿನ ಗಂಭೀರ ಲಕ್ಷಣಗಳಿದ್ದರೆ ಪ್ರಾಣಕ್ಕೇ ಅಪಾಯ ಅನ್ನೋದು ಎಲ್ಲರಿಗೂ ತಿಳಿದಿದೆ. ಹಾಗಂತ ಸೌಮ್ಯವಾದ ಅಥವಾ ಮಧ್ಯಮ ಪ್ರಮಾಣದ ಕೋವಿಡ್‌ ಲಕ್ಷಣಗಳಿದ್ದರೆ ಅದನ್ನು ಕಡೆಗಣಿಸಬೇಡಿ. ಅಪಾಯಕಾರಿ ಲಕ್ಷಣಗಳಿಲ್ಲದೇ ಇದ್ದರೂ ಅಂತಹ ಕೋವಿಡ್‌ ಸೋಂಕು, ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯವನ್ನೇ ಕಸಿದುಕೊಳ್ಳಬಹುದು. ಇಂಥದ್ದೊಂದು ಆಘಾತಕಾರಿ ಸಂಗತಿ ಸಂಶೋಧನೆಯಿಂದ ಬಯಲಾಗಿದೆ.

ಕೊರೊನಾ ಸೋಂಕಿನಿಂದಾಗಿ ಪುರುಷ ಸಂತಾನೋತ್ಪತ್ತಿ ಕ್ರಿಯೆಗೆ ಸಂಬಂಧಿಸಿದ ಪ್ರೊಟೀನ್‌ಗಳ ಮಟ್ಟ ಕಡಿಮೆಯಾಗುವ ಅಪಾಯವಿರುತ್ತದೆ. ಫಲವತ್ತತೆಯನ್ನು ಸಹ ಕುಂಠಿತಗೊಳಿಸಬಹುದು ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯ ಸಂಶೋಧಕರ ತಂಡ ಬಹಿರಂಗಗೊಳಿಸಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಪುರುಷರ ವೀರ್ಯಾಣುಗಳನ್ನು ಪರೀಕ್ಷೆಗೆ ಒಳಪಡಿಸಿದ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ.

ಕೊರೊನಾ ಸೋಂಕಿಗೆ ಕಾರಣವಾಗುವ SARS-CoV-2, ಮುಖ್ಯವಾಗಿ ಉಸಿರಾಟದ ವ್ಯವಸ್ಥೆ ಮತ್ತು ದೇಹದ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಸಂಶೋಧಕರ ಪ್ರಕಾರ ಇತರ ಅಂಗಾಂಶಗಳನ್ನು ಸಹ ಹಾನಿಗೊಳಿಸುತ್ತದೆ. ಇತ್ತೀಚಿಗೆ ದೊರೆತಿರುವ ಪುರಾವೆಗಳು, COVID-19 ಸೋಂಕು ಪುರುಷ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ ಎಂಬುದನ್ನು ದೃಢಪಡಿಸಿದೆ.

ಪುರುಷ ಸಂತಾನೋತ್ಪತ್ತಿ ಅಂಗಗಳಲ್ಲಿ ವೈರಸ್ ಪತ್ತೆಯಾಗಿದೆಯೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕೊರೊನಾ ಸೋಂಕು ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವುದು ಖಚಿತವಾಗಿದೆ. ಆರೋಗ್ಯವಂತ ಪುರುಷರ ವೀರ್ಯದಲ್ಲಿನ ಪ್ರೋಟೀನ್‌ಗಳ ಮಟ್ಟವನ್ನು, ಕೋವಿಡ್‌ ಸೋಂಕಿಗೆ ತುತ್ತಾಗಿರುವ ಪುರುಷರೊಂದಿಗೆ ಹೋಲಿಸಿದ್ದಾರೆ. 10 ಆರೋಗ್ಯವಂತ ಪುರುಷರು ಮತ್ತು ಇತ್ತೀಚೆಗೆ COVID-19 ನಿಂದ ಚೇತರಿಸಿಕೊಂಡ 17 ಪುರುಷರ ವೀರ್ಯ ಮಾದರಿಗಳನ್ನು ವಿಶ್ಲೇಷಿಸಲಾಗಿದೆ.

ಕೊರೊನಾದಿಂದ ಗುಣಮುಖರಾದ ಪುರುಷರಲ್ಲಿ ಸ್ಪರ್ಮ್‌ ಕೌಂಟ್‌ ಮತ್ತು ಚಲನಶೀಲತೆ ಗಮನಾರ್ಹವಾಗಿ ಕಡಿಮೆಯಾಗಿರುವುದು ಸಂಶೋಧನೆಯಲ್ಲಿ ಪತ್ತೆಯಾಗಿದೆ. ಸಂಶೋಧಕರು ಲಿಕ್ವಿಡ್ ಕ್ರೊಮ್ಯಾಟೋಗ್ರಫಿ-ಟಂಡೆಮ್ ಮಾಸ್ ಸ್ಪೆಕ್ಟ್ರೋಮೆಟ್ರಿಯನ್ನು ಬಳಸಿಕೊಂಡು ವೀರ್ಯ ಪ್ರೋಟೀನ್‌ಗಳನ್ನು ವಿಶ್ಲೇಷಿಸಿದ್ದು, ಇವರಲ್ಲಿ 27 ಪ್ರೋಟೀನ್‌ ಗಳು ಉನ್ನತ ಮಟ್ಟದಲ್ಲಿದ್ರೆ, 21 ಪ್ರೋಟೀನ್‌ ಗಳು ಕಡಿಮೆ ಮಟ್ಟದಲ್ಲಿವೆ.

ಅನೇಕ ಪ್ರೋಟೀನ್‌ಗಳು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ ಎಂದು ಸಂಶೋಧಕರು ಹೇಳಿದ್ದಾರೆ. ಫಲವತ್ತತೆಗೆ ಸಂಬಂಧಿಸಿದ ಎರಡು ಪ್ರೋಟೀನ್‌ಗಳು, ಸೆಮೆನೊಜೆಲಿನ್ 1 ಮತ್ತು ಪ್ರೊಸಾಪೊಸಿನ್, ಅವರು ಹೇಳಿದ ನಿಯಂತ್ರಣಗಳ ವೀರ್ಯಕ್ಕಿಂತ COVID-19ನಿಂದ ಚೇತರಿಸಿಕೊಂಡ ಗುಂಪಿನವರಲ್ಲಿ ಅರ್ಧಕ್ಕಿಂತ ಕಡಿಮೆ ಮಟ್ಟದಲ್ಲಿವೆ. ಈ ಸಂಶೋಧನೆಗಳನ್ನು ಪುಷ್ಠೀಕರಿಸಲು ಇನ್ನಷ್ಟು ಅಧ್ಯಯನಗಳ ಅವಶ್ಯಕತೆಯಿದೆ. ಇತರ ಕಾಯಿಲೆಗಳಿಂದ ಗುಣಮುಖರಾದ ಪುರುಷರ ವೀರ್ಯದ ಗುಣಮಟ್ಟವನ್ನು ಸಹ ಸಂಶೋಧನೆಗೆ ಒಳಪಡಿಸಿದಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...