ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಅದರಲ್ಲಿಯೂ ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯತ್ತ ಮುಖ ಮಾಡಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ.
ಕೊರೊನಾ ಮೊದಲ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಕೂಡ ಆಸ್ಪತ್ರೆಗಳು ಕಿಕ್ಕಿರಿದ್ದು ತುಂಬಿದ್ದವು. ಹಲವೆಡೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಕಾರಣ, ಹಲವು ಕೊರೊನಾ ರೋಗಿಗಳು ಸಾವನ್ನಪ್ಪಿರುವ ಘಟನೆಗಳು ಕೂಡ ಜರುಗಿದ್ದವು. ಮೊದಲ ಅಲೆಯ ಸಂದರ್ಭದಲ್ಲಿ ಮಹಾಮಾರಿ 60 ವರ್ಷ ಮೇಲ್ಪಟ್ಟವರನ್ನು ಹೆಚ್ಚಾಗಿ ಕಾಡಿದ್ದರೆ, ಎರಡನೇ ಅಲೆಯ ಸಂದರ್ಭದಲ್ಲಿ 45 ವರ್ಷದೊಳಗಿನವರನ್ನು ಹೆಚ್ಚಾಗಿ ಕಾಡಿತ್ತು. ಸದ್ಯ ಮೂರನೇ ಅಲೆಯ ಭೀತಿ ಹೆಚ್ಚಾಗಿದ್ದು, ಇದರ ಮಧ್ಯೆ ಓಮಿಕ್ರಾನ್ ಸೇರಿದಂತೆ ರೂಪಾಂತರಿಗಳ ಭಯ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ವಯೋಮಾನದವರಿಗೂ ಆತಂಕ ಶುರುವಾಗಿದೆ. ಲಕ್ಷಣಗಳು ಕಾಣುತ್ತಿದ್ದಂತೆ ಹಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೀಗೆ ಬೆಂಗಳೂರು ನಗರದಲ್ಲಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಬಿಬಿಎಂಪಿ ನೀಡಿದ ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ, ಕಳೆದ 14 ದಿನಗಳಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸೋಂಕಿತರ ಪೈಕಿ 38 ಜನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, 296 ಜನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿನ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೊರೊನಾ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದೆ. ಅದರಲ್ಲಿಯೂ ಈ ಬಾರಿ ಆರಂಭದ ಹಂತದಲ್ಲಿ 45 ವಯಸ್ಸು ಮೇಲ್ಪಟ್ಟವರೇ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎನ್ನಲಾಗಿದೆ. ನಗರದ ವಿವಿಧ ಆಸ್ಪತ್ರೆಗಳಲ್ಲಿ ಸದ್ಯ ಕೊರೊನಾದ 8,671 ಸಕ್ರಿಯ ಪ್ರಕರಣಗಳಿವೆ.
ಬಹುತೇಕ ರೋಗಿಗಳಲ್ಲಿ ಸೌಮ್ಯ ಲಕ್ಷಣಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಸದ್ಯದ ಅಂಕಿ ಸಂಖ್ಯೆಯಂತೆ ಬೆಂಗಳೂರು ನಗರದಲ್ಲಿ ಪ್ರತಿದಿನ ಸರಾಸರಿ 26 ರೋಗಿಗಳು ಕೊರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇನ್ನೂ ಹೆಚ್ಚಳವಾಗಬಹುದು. ಜನರು ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಸೋಂಕಿತರ ಸಂಖ್ಯೆ ಇದೇ ರೀತಿ ಹೆಚ್ಚಳವಾದರೆ, ಸರ್ಕಾರ ಕೂಡ ಕಟ್ಟುನಿಟ್ಟಿನ ಕ್ರಮ ಜರುಗಿಸಲಿದೆ.