ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಬಗೆಹರಿದಂತಾಗಿದೆ. ಇನ್ಮುಂದೆ ಈದ್ಗಾ ಮೈದಾನ ಆಟದ ಮೈದಾನವಾಗಿ ಇರುತ್ತದೆ ಎಂದು ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಈದ್ಗಾ ಮೈದಾನ ವಿವಾದ ವಿಚಾರವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಜಮೀರ್ ಅಹ್ಮದ್, ಈದ್ಗಾ ಮೈದಾನದಲ್ಲಿ ಮಕ್ಕಳಿಗೆ ಆಟವಾಡಲು ಅವಕಾಶವಿಲ್ಲ ಎಂದು ಯಾರೂ ಹೇಳಿಲ್ಲ. ನನ್ನ ಪ್ರಾಣ ಇರುವವರೆಗೂ ಮೈದಾನವನ್ನು ತೆಗೆಯಲು ಸಾಧ್ಯವಿಲ್ಲ. ಎಲ್ಲರೂ ಆಟದ ಮೈದಾನ ಉಳಿಸುವಂತೆ ಕೇಳಿಕೊಂಡಿದ್ದಾರೆ. ಮೈದಾನವನ್ನು ತೆಗೆಯಲು ಸಾಧ್ಯವಿಲ್ಲ. ಈ ಬಗ್ಗೆ ಯಾವುದೇ ಗೊಂದಲ, ಆತಂಕ ಬೇಡ ಎಂದರು.
ಈದ್ಗಾ ಮೈದಾನ ಆಟದ ಮೈದಾನವಾಗಿರುವುದಿಲ್ಲ ಎಂದು ಹೇಳಿರುವುದು ಯಾರು? ಬಿಬಿಎಂಪಿ, ವಕ್ಫ್ ಬೋರ್ಡ್ ಯಾರಾದ್ರೂ ಇಲ್ಲಿ ಆಟದ ಮೈದಾನ ಇರಲ್ಲ ಎಂದು ಹೇಳಿದ್ದಾರಾ? 1871ರಿಂದಲೂ ಇದನ್ನು ಈದ್ಗಾ ಮೈದಾನವಾಗಿ ಗುರುತಿಸಲಾಗಿದೆ. ಆರಂಭದಿಂದಲೂ ಇದನ್ನು ಆಟದ ಮೈದಾನವಾಗಿ ಉಳಿಸಬೇಕು ಎಂಬ ಉತ್ತಾಯ ಕೇಳಿಬಂದಿದೆ. ಈದ್ಗಾ ಮೈದಾನ ಆಟದ ಮೈದಾನವಾಗಿಯೇ ಇರುತ್ತದೆ. ನನ್ನ ಪ್ರಾಣ ಹೋಗುವವರೆಗೂ ಈ ಮೈದಾನ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಸಭೆಯಲ್ಲಿ ಈದ್ಗಾ ಮೈದಾನ ಆಟದ ಮೈದಾನವಾಗಿ ಉಳಿಸುವ ಬಗ್ಗೆ ಸದಸ್ಯರು ಕೈ ಎತ್ತುವ ಮೂಲಕ ಒಮ್ಮತ ವ್ಯಕ್ತಪಡಿಸಿದರು. ಒಟ್ಟಾರೆ ಈದ್ಗಾ ಮೈದಾನ ವಿವಾದ ಬಗೆಹರಿದಿದ್ದು, ಇನ್ಮುಂದೆ ಆಟದ ಮೈದಾನವಾಗಿ ಮುಂದುವರೆಯಲಿದೆ.