ಬೆಂಗಳೂರು: ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವೋಲ್ವೋ ಬಸ್ ನಲ್ಲಿಯೂ ಮಹಿಳೆಯರು ಫ್ರೀಯಾಗಿ ಪ್ರಯಾಣಿಸಬಹುದಾಗಿದೆ. ಮಹಿಳೆಯರು ಸಾಕಷ್ಟು ಅವಕಾಶ ವಂಚಿತರಾಗಿದ್ದಾರೆ. ಮಹಿಳಾ ಸಬಲೀಕರಣ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಹೆಚ್ಚು ಭಾಗಿಯಾಗಬೇಕು ಎಂದರು.
ನಾವು ಘೋಷಿಸಿರುವ 5 ಗ್ಯಾರಂಟಿಗಳ ಪೈಕಿ ನಾಲ್ಕು ಯೋಜನೆಗಳು ಮಹಿಳೆಯರಿಗೆ ಹೆಚ್ಚು ಅನುಕೂಲವಾಗಲಿದೆ. ಜುಲೈ 1ರಿಂದ ಗೃಹಜ್ಯೋತಿ ಜಾರಿಗೆ ಬರಲಿದೆ. ಗೃಹಲಕ್ಷ್ಮೀ ಯೋಜನೆಯೂ ಶೀಘ್ರವಾಗಿ ಜಾರಿಯಾಗಲಿದೆ. ಅನ್ನಭಾಗ್ಯ ಯೋಜನೆಯಡಿ ಎಲ್ಲರಿಗೂ 10ಕೆಜಿ ಉಚಿತ ಅಕ್ಕಿ ವಿತರಿಸಲಾಗುವುದು. ವಿಪಕ್ಷಗಳ ಟೀಕೆಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಜನರಿಗೆ 5 ಗ್ಯಾರಂಟಿ ಯೋಜನೆ ಭರವಸೆ ನೀಡಿದ್ದೆವು. ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಷ್ಟೇ ಕಷ್ಟವಾದರೂ ಗ್ಯಾರಂಟಿ ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು.